ಮೈಸೂರು:ಖಾತೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಿಕೊಡಲು ಸತಾಯಿಸುವ ಅಧಿಕಾರಿ ವಿರುದ್ಧ ದೂರು ಬಂದರೆ ಅಂತಹವರನ್ನು ಅಮಾನತು ಮಾಡಲಾಗುವುದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಎಚ್ಚರಿಕೆ ನೀಡಿದರು. ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಖಾತೆ, ಕಂದಾಯಗಳನ್ನು ಮಾಡಿಕೊಡಲು ಅಧಿಕಾರಿಗಳು ಸಾರ್ವಜನಿಕರನ್ನು ಅಲೆಸಬಾರದು. ಈಗಾಗಲೇ ಇಂತಹ ವಿಚಾರಗಳು ಗಮನಕ್ಕೆ ಬಂದಿವೆ. ಪುರಸಭೆ, ನಗರಸಭೆ ಆಯುಕ್ತರು, ತಹಸೀಲ್ದಾರ್ ಅವರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.
400 ರೌಡಿ ಶೀಟರ್ ಹೆಸರು ಪಟ್ಟಿ:ಮುಂಬರುವ ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, 400 ರೌಡಿಶೀಟರ್ಗಳನ್ನು ಗುರುತಿಸಲಾಗಿದೆ. ಇವರಲ್ಲಿ ಓರ್ವ ರೌಡಿಶೀಟರ್ನ್ನು ಈಗಾಗಲೇ ಗಡಿಪಾರು ಮಾಡಲಾಗಿದ್ದು, ಇನ್ನೂ 3 ಮಂದಿಯನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವರ ಚಲನವಲನಗಳನ್ನು ಪರಿಶೀಲಿಸಿ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ. ಇನ್ನೂ ಕೆಲವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಗಟ್ಟಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರವಾಸೋದ್ಯಮದಕ್ಕೆ ಹೆಚ್ಚಿನ ಒತ್ತು: ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿರುವಂತಹ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತಂದು ಮೈಸೂರಿನಲ್ಲಿ ವರ್ಷಪೂರ್ತಿ ಪ್ರವಾಸೋದ್ಯಮಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗುವುದು. ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ, ರೈಲ್ವೆ, ವಿಮಾನಯಾನ ಸೇವೆ ಸುಧಾರಿಸಿದೆ. ಹೀಗಾಗಿ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳನ್ನು ತರಲು ಅವಕಾಶವಿದೆ ಎಂದು ಹೇಳಿದರು.
ಮೈಸೂರಿನ ಎಲ್ಲ ಪ್ರವಾಸಿ ತಾಣಗಳು 5.30ರ ನಂತರ ಮುಚ್ಚಲ್ಪಡುತ್ತವೆ. ಹಾಗಾಗಿ ಸಂಜೆಯ ನಂತರ ಪ್ರವಾಸಿಗರಿಗೆ ಯಾವುದೇ ರೀತಿಯ ಮನರಂಜನೆ ಸಿಗುವುದಿಲ್ಲ. ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿರುವಂತ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸಿಸ್ಟಮ್ ಜಾರಿಗೆ ತಂದು ವರ್ಷದ ಎಲ್ಲ ವಾರಾಂತ್ಯಗಳಲ್ಲಿಯೂ ಕಾರ್ಯಕ್ರಮ ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮಹಿಳೆ, ವೃದ್ಧರು, ಮಕ್ಕಳು, ಹಿಂದುಳಿದ ವಿಭಾಗಗಳಿಗೆ ರಕ್ಷಣೆ, ಟ್ರಾಫಿಕ್ ಕಂಟ್ರೋಲ್ ಹಾಗೂ ಇನ್ನಿತರ ವಿಷಯಗಳಲ್ಲಿ ಬದಲಾವಣೆ ತಂದು ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲಾಗುವುದು ಎಂದರು.