ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ, ಅದ್ಧೂರಿ ಆಚರಣೆಗೆ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ 16 ಉಪ ಸಮಿತಿಗಳಿಗೆ ಜಿಲ್ಲೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಮೂಲಕ ಭರದ ಸಿದ್ಧತೆ ಆರಂಭಿಸಲಾಗಿದೆ. ಈ ಬಾರಿ ಗಜಪಯಣಕ್ಕೂ ಮುನ್ನವೇ ಅಧಿಕಾರಿಗಳ ನೇತೃತ್ವದ ಉಪಸಮಿತಿಗಳನ್ನು ನೇಮಕ ಮಾಡಿರುವುದು ವಿಶೇಷವಾಗಿದೆ.
ದಸರಾವನ್ನು ಸಾಂಪ್ರದಾಯಿಕ ಹಾಗೂ ಅದ್ಧೂರಿಯಾಗಿ ನಾಡಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮವನ್ನಾಗಿ ಮಾಡಲು ಸ್ವತಃ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಂತರ ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ನೇತೃತ್ವದಲ್ಲಿ ಸಭೆ ನಡೆದಿದ್ದು ಉಪ ಸಮಿತಿಗಳನ್ನು ರಚಿಸಿ, ಅದಕ್ಕೆ ಉಪ ವಿಶೇಷಾಧಿಕಾರಿಗಳು, ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳಿಗೆ ಸಿದ್ಧತೆ ಆರಂಭಿಸುವಂತೆ ಸಚಿವರು ಸೂಚಿಸಿದ್ದಾರೆ. ಯಾವುದೇ ಗೊಂದಲ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆಯೂ ತಿಳಿಸಲಾಗಿದೆ.
ಸೆಪ್ಟೆಂಬರ್ 1ಕ್ಕೆ ಗಜಪಯಣ: ಸೆಪ್ಟೆಂಬರ್ 1ಕ್ಕೆ ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಮೈಸೂರಿಗೆ ಕರೆತರುವ ಮೂಲಕ ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಆ ನಂತರ ಅರಮನೆಗೆ ಸೆಪ್ಟೆಂಬರ್ 4ರಂದು ಆಗಮಿಸುವ ಗಜಪಡೆ ಅರಮನೆಯಲ್ಲೇ ವಾಸ್ತವ್ಯ ಹೂಡಲಿದೆ. ಸುಮಾರು ಎರಡು ತಿಂಗಳ ಕಾಲ ಅರಮನೆಯಲ್ಲಿರುವ ಗಜಪಡೆಗೆ ಪ್ರತಿನಿತ್ಯ ತಾಲೀಮು ಹಾಗೂ ವಿಶೇಷ ಆಹಾರಗಳ ಮೂಲಕ ಜಂಬೂ ಸವಾರಿಗೆ ತಯಾರಿ ಮಾಡಲಾಗುತ್ತದೆ. ಪ್ರತಿ ವರ್ಷ ಗಜಪಯಣದ ನಂತರ ದಸರಾ ಚಟುವಟಿಕೆಗಳು ಆರಂಭವಾಗುತ್ತಿದ್ದವು. ಈ ಬಾರಿ ಗಜಪಯಣಕ್ಕೂ ಮುನ್ನವೇ ಸಿದ್ಧತೆಗಾಗಿ ಉಪ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಉಪ ಸಮಿತಿಗಳ ವಿವರ ಹೀಗಿದೆ:
ಸ್ವಾಗತ, ಆಮಂತ್ರಣ ಸ್ಥಳಾವಕಾಶ ಸಮಿತಿ - ಕವಿತಾ ರಾಜರಾಂ, ಎಂ.ಜೆ.ರೂಪಾ, ಕೆ.ಆರ್.ರಕ್ಷಿತ್, ಮಂಜುನಾಥ್ ರೆಡ್ಡಿ, ಗಿರೀಶ್, ಶಿವಕುಮಾರ್.
ಮೆರವಣಿಗೆ ಮತ್ತು ಪಂಜಿನ ಕವಾಯಿತು ಸಮಿತಿ - ಬಿ.ರಮೇಶ್, ಎಸ್.ಜಾಹ್ನವಿ, ಮಾರುತಿ ಶಾಂತಮಲ್ಲಪ್ಪ, ಡಾ.ಎಂ.ಡಿ.ಸುದರ್ಶನ್, ಸಿ.ಕೆ.ಅಶ್ವತ್ ನಾರಾಯಣ್.
ಸ್ತಬ್ಧ ಚಿತ್ರ ಸಮಿತಿ- ಸೌಮಿತ್ರಾ, ರಂಗೇಗೌಡ, ಮೇಘಲಾ.
ಕ್ರೀಡಾ ಸಮಿತಿ- ಸೀಮಾ ಲಾಟ್ಕರ್, ಎಂ.ಸಿ.ರಮೇಶ್, ಭಾಸ್ಕರ್ ನಾಯಕ್.
ಸಾಂಸ್ಕೃತಿಕ ದಸರಾ ಸಮಿತಿ- ಕೆ.ಎಂ.ಗಾಯತ್ರಿ, ನಿರ್ಮಲ ಮಠಪತಿ, ಟಿ.ಎಸ್. ಸುಬ್ರಹ್ಮಣ್ಯ, ಡಾ.ಎಂ ಡಿ.ಸುದರ್ಶನ್.
ಲಲಿತ ಕಲೆ ಸಮಿತಿ- ಮಂಜುನಾಥ್ ಸಿಂಗ್, ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಶ್ಮಿ.