ಮೈಸೂರು:ಅಭಿಮನ್ಯು ಆನೆ ಹೊತ್ತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ವಿಜಯದಶಮಿ ಜಂಬೂ ಸವಾರಿಗೆ ಮಂಗಳವಾರ ಸಂಜೆ ಅದ್ಧೂರಿಯಿಂದ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಶುಭ ಮೀನ ಲಗ್ನದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದರು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಸಚಿವರುಗಳಾದ ಶಿವರಾಜ ತಂಗಡಗಿ, ರಾಜಣ್ಣ, ಬೈರತಿ ಸುರೇಶ್, ಎಂ.ಸಿ.ಸುಧಾಕರ, ಮಂಕಾಳು ವೈದ್ಯ ವೇದಿಕೆಯಲ್ಲಿ ಹಾಜರಿದ್ದರು. ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡಿದ ಸಿದ್ದರಾಮಯ್ಯ ಎರಡೆರೆಡು ಬಾರಿ ಚಾಮುಂಡೇಶ್ವರಿಗೆ ಕೈ ಮುಗಿದಿದ್ದು ವಿಶೇಷವಾಗಿತ್ತು.
750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ಸ್ಥಾಪಿತಳಾದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು 4ನೇ ಬಾರಿ ಅಭಿಮನ್ಯು ಆನೆ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಕುಮ್ಕಿ ಆನೆಗಳಾಗಿ ಲಕ್ಷ್ಮಿ, ವಿಜಯ ಸಾಥ್ ನೀಡಿದವು. ಜಂಬೂ ಸವಾರಿ ಅರಮನೆಯ ಬಲರಾಮ ಗೇಟ್ ಮೂಲಕ ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ಸರ್ಕಲ್ ಹಾಗೂ ಬಂಬೂ ಬಜಾರ್ ಮೂಲಕ ಬನ್ನಿ ಮಂಟಪದತ್ತ ಸಾಗಿತು. ದೇಶ-ವಿದೇಶದಿಂದ ಆಗಮಿಸಿದ್ದ ಕೋಟ್ಯಂತರ ಪ್ರವಾಸಿಗರು ಜಗತ್ಪ್ರಸಿದ್ಧ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು.