ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಇಂದು ಮೈಸೂರು ಒಡೆಯರ್ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಅರಮನೆಯಲ್ಲಿರುವ ನಿವಾಸದಲ್ಲಿ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲ ತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುರಕ್ಷತೆ ಕಡೆಗೂ ಗಮನವಿರಲಿ:ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆ ಕಡೆಗೂ ಗಮನವಿರಲಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ಅರಮನೆ ಮಂಡಳಿ ಕಚೇರಿಯಲ್ಲಿ ಇಂದು ನಡೆದ ದಸರಾ ಕಾರ್ಯಕ್ರಮಗಳ ಪೂರ್ವ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು. ಎಲ್ಲಿಯೂ ವಿದ್ಯುತ್ ಅವಘಡ ಆಗದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದು ಸೂಚಿಸಿದರು.
ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಕೆಲಸ ಚುರುಕುಗೊಳ್ಳಬೇಕು. ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು, ಮುಖ್ಯ ರಸ್ತೆ ಚರಂಡಿಗಳನ್ನು ಕೂಡಲೇ ದುರಸ್ತಿಪಡಿಸಿ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರುಗಳ ಸುರಕ್ಷತೆಗೂ ಹೆಚ್ಚಿನ ಗಮನಹರಿಸಬೇಕೆಂದರು.