ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಜಯ ದಶಮಿಯ ದಿನ ನಡೆಯಲಿರುವ ಮೆರವಣಿಗೆಗೆ ಗಜಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಈಗಾಗಲೇ ಮರದ ಅಂಬಾರಿ, ಕುಶಾಲತೋಪು ತಾಲೀಮು, ಮರಳು ಮೂಟೆ ತಾಲೀಮು, ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು ಸೇರಿದಂತೆ ಎಲ್ಲ ಬಗೆಯ ತಾಲೀಮುಗಳನ್ನು ಮಾಡಲಾಗಿದೆ. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳು ಸಿದ್ದವಾಗಿವೆ ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.
ಮರದ ಅಂಬಾರಿ ತಾಲೀಮಿನಲ್ಲಿ ಅಭಿಮನ್ಯು, ಮಹೇಂದ್ರ, ಧನಂಜಯ ಆನೆಗಳಿಗೆ ತಾಲೀಮು ಮಾಡಲಾಗಿದೆ. ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಇತರ ಎರಡು ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿವೆ. ಭೀಮ ಮತ್ತು ಧನಂಜಯ ಅರಮನೆಯ ಶರನ್ನವರಾತ್ರಿಯ ಪೂಜೆಯಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಂಡಿವೆ. ಅವುಗಳು ಸಹ ತಾಲೀಮಿನಲ್ಲಿ ಭಾಗವಹಿಸಿವೆ ಎಂದರು.
ಜಂಬೂಸವಾರಿ ಮೆರವಣಿಗೆ ಸಂಜೆ ನಡೆಯುವುದರಿಂದ ದೀಪಾಲಂಕಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಚೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸದ್ಯ ಎಲ್ಲಾ ಆನೆಗಳಿಗೂ ವಿಶೇಷ ಆಹಾರ ನೀಡಲಾಗುತ್ತಿದೆ. ಎಲ್ಲವೂ ಆರೋಗ್ಯವಾಗಿವೆ. ಚಿನ್ನದ ಅಂಬಾರಿ ಇಡುವ ಆನೆಯ ಬೆನ್ನಿನ ಮೇಲೆ ಕಟ್ಟುವ ನಮ್ದಾ ಹಾಗೂ ಗಾದಿಯೂ ತಯಾರಾಗಿದೆ. ಜಂಬೂಸವಾರಿಗೆ ಅರಣ್ಯ ಇಲಾಖೆಯವರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಡಿಸಿಎಫ್ ತಿಳಿಸಿದರು.