ಮೈಸೂರು:ಜಗತ್ಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಆನ್ಲೈನ್ನಲ್ಲಿ ಬುಧವಾರ ಬಿಡುಗಡೆ ಮಾಡಲಾದ 6 ಸಾವಿರ ರೂಪಾಯಿ ಮೌಲ್ಯದ ಗೋಲ್ಡ್ ಕಾರ್ಡ್ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಂದೇ ಗಂಟೆಯಲ್ಲಿ ಒಂದು ಸಾವಿರ ಕಾರ್ಡ್ ಮಾರಾಟವಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 24 ರಂದು ನಡೆಯಲಿರುವ ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ವೀಕ್ಷಣೆಗಿರುವ ಗೋಲ್ಡ್ ಕಾರ್ಡ್ ಅನ್ನು ಇಂದು ಬೆಳಿಗ್ಗೆ 10ಕ್ಕೆ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 1 ಸಾವಿರ ಗೋಲ್ಡ್ ಕಾರ್ಡ್ ಜಂಬೂಸವಾರಿ ವೀಕ್ಷಣೆಗೆ ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ ಎರಡು ಸಾವಿರ ಟಿಕೇಟ್ ಒಂದೇ ಗಂಟೆಯಲ್ಲಿ ಆನ್ಲೈನ್ನಲ್ಲಿ ಮಾರಾಟವಾಗಿದೆ ಎಂದು ಮಾಹಿತಿ ನೀಡಿದೆ.
ಅರಮನೆ ಆವರಣದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಯ ವೀಕ್ಷಣೆಗೆ 3 ಸಾವಿರ ರೂಪಾಯಿ ಮುಖಬೆಲೆಯ 400 ಟಿಕೆಟ್ಗಳು ಹಾಗೂ 2 ಸಾವಿರ ರೂಪಾಯಿ ಮುಖಬೆಲೆಯ 600 ಟಿಕೆಟ್ಗಳು ಸೇಲ್ ಆಗಿವೆ. ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತು ವೀಕ್ಷಣೆಗೆ 500 ರೂಪಾಯಿ ಮುಖಬೆಲೆಯ 1 ಸಾವಿರ ಟಿಕೆಟ್ಗಳು ಆನ್ಲೈನ್ ಮೂಲಕ ಮಾರಾಟವಾಗಿವೆ.
ಆಹಾರ ದಸರಾ- 'ಬಂಬೂ ಬಿರಿಯಾನಿ' ಘಮ: ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ ಬಂಬೂ ಬಿರಿಯಾನಿ ಜನರ ಗಮನ ಸೆಳೆಯುತ್ತಿದೆ. ಇದು ಆರೋಗ್ಯಕ್ಕೆ ಹೇಗೆ ಉಪಕಾರಿ ಎಂಬ ಬಗ್ಗೆ ಬುಡಕಟ್ಟು ಜನಾಂಗದ ಕೃಷ್ಣಯ್ಯ ಈಟಿವಿ ಭಾರತದೊಂದಿಗೆ ಮಾಹಿತಿ ನೀಡಿದರು. ಆಧುನಿಕ ಯುಗದಲ್ಲಿ ಜನರು ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿಗೆ ಮರಳುತ್ತಿದ್ದಾರೆ. ಇದಕ್ಕೆ ನಿದರ್ಶನ ಮೈಸೂರಿನ ದಸರಾ ಆಹಾರ ಮೇಳ. ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದ ಮಳಿಗೆಯಲ್ಲಿರುವ ಬುಡಕಟ್ಟು ಆಹಾರ ಬಂಬೂ ಬಿರಿಯಾನಿ ಸವಿಯಲು ನಗರದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಗರುಡ ಉತ್ಸವ: ನವರಾತ್ರಿಯ 4ನೇ ದಿನವಾದ ಬುಧವಾರ ಚಾಮುಂಡಿ ಬೆಟ್ಟದಲ್ಲಿ ದೇವಿಯ ಮೂಲ ಉತ್ಸವ ಮೂರ್ತಿಗೆ ಗರುಡ ಉತ್ಸವ ವಿಜೃಂಭಣೆಯಿಂದ ಜರುಗಿತು. ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ನಡೆಯುತ್ತಿದ್ದು, ಮೂಲ ಚಾಮುಂಡೇಶ್ವರಿಗೆ ಇಂದು ವೈಷ್ಣವಿ ಅಲಂಕಾರ ಮಾಡಲಾಗಿತ್ತು. ಉತ್ಸವ ಮೂರ್ತಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಬಳಿಕ ಮೂಲ ಮೂರ್ತಿಗೆ ಮಹಾಮಂಗಳಾರತಿ ಬೆಳಗಿ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಗರುಡ ಉತ್ಸವ ನೆರವೇರಿಸಲಾಯಿತು.
ಇದನ್ನೂ ಓದಿ:ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ 'ಬಂಬೂ ಬಿರಿಯಾನಿ' ಘಮ