ಮೈಸೂರು : ರಾಜ ಪರಂಪರೆಯ ಪ್ರತೀಕವಾದ ಕುಸ್ತಿಗೆ ಮೈಸೂರು ದಸರಾದಲ್ಲಿ ತನ್ನದೇ ಆದ ಮಹತ್ವವಿದೆ. ಇಲ್ಲಿ ದಸರಾ ಎಂದರೆ ಕುಸ್ತಿ, ಕುಸ್ತಿ ಎಂದರೆ ದಸರಾ ಎನ್ನುವಷ್ಟರ ಮಟ್ಟಿಗೆ ಜನರ ಉಸಿರಾಗಿದೆ. ನಾಡಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕುಸ್ತಿಯ ಗರಡಿ ಮನೆಗಳು ಹೇಗಿವೆ, ಕುಸ್ತಿ ಪಟುಗಳು ಹೇಗೆ ತಯಾರಾಗುತ್ತಾರೆ, ಕುಸ್ತಿಯಲ್ಲಿ ಎಷ್ಟು ವಿಧ, ದಸರಾದಲ್ಲಿ ನಾಡ ಕುಸ್ತಿ ಹೇಗೆ ನಡೆಯುತ್ತದೆ ಎಂಬೆಲ್ಲ ವಿವರ ಇಲ್ಲಿದೆ.
ರಾಜ ವಂಶಸ್ಥರು ನಗರದಲ್ಲಿ ಕುಸ್ತಿ ಗರಡಿ ಮನೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇಂದಿಗೂ ಪರಂಪರೆಯ ಕುಸ್ತಿ ಪಂದ್ಯಾವಳಿಗಳು ದಸರಾ ವೇಳೆ ನಡೆಯುತ್ತವೆ. ನಗರದಲ್ಲಿ ನೂರಕ್ಕೂ ಹೆಚ್ಚು ಗರಡಿ ಮನೆಗಳಿವೆ. ಪ್ರತಿನಿತ್ಯ ತರಬೇತಿಗಳು ನಡೆಯುತ್ತಲೇ ಇರುತ್ತವೆ.
ಗರಡಿ ಮನೆಯಲ್ಲಿ ತರಬೇತಿಗಳು ವರ್ಷಪೂರ್ತಿ ನಡೆಯುತ್ತವೆ. ಈ ಮೂಲಕ ನಾಡಹಬ್ಬ ದಸರಾಗೆ ಯುವಕರು ತಯಾರಾಗುತ್ತಾರೆ. ಪ್ರತಿನಿತ್ಯ ಈ ಮನೆಗಳಲ್ಲಿ ಗುರುಗಳಿಂದ ಕುಸ್ತಿಯ ಅಭ್ಯಾಸ, ಆಹಾರ ಕ್ರಮ ಎಲ್ಲವೂ ನಿಯಮದ ರೀತಿಯಂತೆ ನಡೆಯುತ್ತವೆ. ಅದಕ್ಕಾಗಿಯೇ ಮೈಸೂರಿನಲ್ಲಿ ಕುಸ್ತಿ ಉಳಿವಿಗಾಗಿ ಜಿಲ್ಲಾ ಕುಸ್ತಿ ಸಂಘ ಎಂದು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಶಿಸ್ತುಬದ್ಧ ತರಬೇತಿ ಪಡೆದ ಪೈಲ್ವಾನರು ರಾಜ್ಯಾದ್ಯಂತ ಅಲ್ಲದೇ, ಹೊರ ರಾಜ್ಯಗಳಲ್ಲೂ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಾರೆ ಎಂದು ಸ್ವತಃ ಪೈಲ್ವಾನ್ ಆಗಿದ್ದ ಚಂದ್ರಶೇಖರ್ ಈಟಿವಿ ಭಾರತ್ಗೆ ವಿವರಿಸಿದರು.