ಮೈಸೂರು : ಈ ಬಾರಿಯ ವಿಶ್ವ ವಿಖ್ಯಾತ ನಾಡಹಬ್ಬ ದಸರಾದಲ್ಲಿ ಮೊದಲ ಹಂತದ 9 ಆನೆಗಳ ಗಜಪಡೆಯನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿದೆ. ಇದರಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ಇದ್ದು, ಸೆಪ್ಟೆಂಬರ್ ಒಂದರಂದು ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗುವುದು. ಒಂಭತ್ತು ಆನೆಗಳು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಲಿದ್ದು, ಸೆಪ್ಟೆಂಬರ್ 4 ರಂದು ಸಾಂಪ್ರದಾಯಿಕ ಸ್ವಾಗತದ ಮೂಲಕ ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ.
ದಸರಾದಲ್ಲಿ ಪಾಲ್ಗೊಳ್ಳುವ ಮೊದಲ ಹಂತದ ಗಜಪಡೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮಂಗಳವಾರ ಮೈಸೂರಿನ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಿತು. ಸೆಪ್ಟೆಂಬರ್ 1 ರಂದು ನಾಗರಹೊಳೆ ಹೆಬ್ಬಾಗಿಲು ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಲ್ಲಿ ಗಜಪಯಣ ಕಾರ್ಯಕ್ರಮ ನಡೆಸಿ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಆನೆಗಳನ್ನು ಸಾಂಸ್ಕೃತಿಕ ನಗರಿಗೆ ಕರೆತರಲಾಗುವುದು. ಹೀಗೆ ಕರೆತಂದ ಗಜಪಡೆ ಮೈಸೂರಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲಿದೆ. ನಂತರ ಸೆಪ್ಟೆಂಬರ್ 4 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅರಮನೆಗೆ ಸ್ವಾಗತಿಸಲಾಗುವುದು. ಬಳಿಕ, ಅರಮನೆಯಲ್ಲಿ ವಾಸ್ತವ್ಯ ಹೂಡಲಿರುವ ಗಜಪಡೆ ಹಾಗೂ ಮಾವುತರು ಮತ್ತು ಕಾವಾಡಿಗರ ಕುಟುಂಬ ನಂತರ 45 ದಿನಗಳ ಕಾಲ ತಾಲೀಮು ನಡೆಸಲಿದ್ದಾರೆ.
ಗಜಪಡೆ ಆಯ್ಕೆಯ ಮಾನದಂಡವೇನು? : ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 14 ಆನೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಸಿಬ್ಬಂದಿ ಆನೆ ಶಿಬಿರಗಳಿಗೆ ಹೋಗಿ, ಆನೆ ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳಿಂದ ಆನೆಗಳ ಚಲನವಲನ ಹಾಗೂ ಇತರೆ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಂತರ ಆನೆಗಳ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಬಳಿಕ, ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡುತ್ತಾರೆ. ಕಳೆದ ಬಾರಿ ಹಾಗೂ ಹಿಂದೆ ಈ ಆನೆಗಳು ದಸರಾದಲ್ಲಿ ಪಾಲ್ಗೊಂಡ ಬಗ್ಗೆ ಸಹ ಮಾಹಿತಿ ಕಲೆಹಾಕುತ್ತಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಆನೆಗಳನ್ನು ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳಿಂದ ಪಡೆದ ಮಾಹಿತಿ ಮುಖ್ಯವಾಗಿರುತ್ತದೆ.
ಮೊದಲ ಹಂತದ ಗಜಪಯಣಕ್ಕೆ ಆಯ್ಕೆಯಾದ ಅನೆಗಳು : ನಿನ್ನೆ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಗಂಡಾನೆಗಳಾದ ಭೀಮ, ಅಭಿಮನ್ಯು, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ ಹಾಗೂ ಹೆಣ್ಣಾನೆಗಳಾದ ವಿಜಯ ಮತ್ತು ವರಲಕ್ಷ್ಮಿ ಹೆಸರನ್ನು ಅಂತಿಮಗೊಳಿಸಲಾಗಿದೆ.