ಮೈಸೂರು : ಪ್ಲಾಸ್ಟಿಕ್ ಪರಿಸರವನ್ನು ಕಾಡುತ್ತಿರುವ ಸಮಸ್ಯೆ. ಇಂತಹ ಪ್ಲಾಸ್ಟಿಕ್ ಸಮಸ್ಯೆ ನಿವಾರಣೆಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಳಸಿ ಬಿಸಾಡುವ ಕವರ್ನಿಂದ ಗಟ್ಟಿಮುಟ್ಟಾದ ಟೈಲ್ಸ್ ತಯಾರಿಸುವ ಘಟಕವನ್ನು ಪಾಲಿಕೆಯ ಕಸ ಸಂಗ್ರಹಣೆ ಘಟಕದಲ್ಲಿ ಸ್ಥಾಪನೆ ಮಾಡಲಾಗಿದ್ದು, ಈ ಘಟಕ ಯಾವ ರೀತಿ ಕೆಲಸ ಮಾಡುತ್ತದೆ ಹಾಗೂ ಇದರಿಂದ ಆಗುವ ಪ್ರಯೋಜನವೇನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಮೈಸೂರು ಮಹಾನಗರ ಪಾಲಿಕೆಯ ಕಸ ಸಂಗ್ರಹಣ ಘಟಕ ಇರುವ ವಿದ್ಯಾರಣ್ಯಪುರಂನ "ಸೀ ವೇಜ್ " ಫಾರಂನಲ್ಲಿ ಪಾಲಿಕೆಯು ಖಾಸಗಿ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ತಂತ್ರಜ್ಞಾನದ ಸಹಯೋಗದೊಂದಿಗೆ ಫ್ಯಾಕ್ಟರಿ ಪ್ರಾರಂಭ ಮಾಡಿದೆ. ಈ ಕಾರ್ಖಾನೆಯಲ್ಲಿ ಬಳಸಿ ಬಿಸಾಡಿದ ಸಿಂಗಲ್ ಯೂಸ್ ಪ್ಲಾಸ್ಟಿಕ್ಅನ್ನು ಪಾಲಿಕೆಯ ಪೌರಕಾರ್ಮಿಕರು ಕಲೆಕ್ಟ್ ಮಾಡಿ ತಂದು ಕೊಡುತ್ತಾರೆ. ಈ ಪ್ಲಾಸ್ಟಿಕ್ ಅನ್ನು ಕಾರ್ಖಾನೆಯಲ್ಲಿ ಗಟ್ಟಿಮುಟ್ಟಾದ ಟೈಲ್ಸ್ ಆಗಿ ಪರಿವರ್ತಿಸಲಾಗುತ್ತದೆ. ಜೊತೆಗೆ, ಆಹಾರ ಪದಾರ್ಥಗಳನ್ನು ತುಂಬುವ ಪ್ಲಾಸ್ಟಿಕ್ ಕವರ್ಗಳಿಂದಲೂ ಸಹ ಕಂಪನಿ ಟೈಲ್ಸ್ಗಳನ್ನು ತಯಾರಿಸುತ್ತಿದೆ.
ಪ್ರತಿನಿತ್ಯ ಎರಡು ಟನ್ ಪ್ಲಾಸ್ಟಿಕ್ನಿಂದ ಪಾಲಿಕೆಯ ಕಾಮಗಾರಿಗಳಿಗೆ ಬೇಕಾದ ಟೈಲ್ಸ್ ಗಳನ್ನು ತಯಾರು ಮಾಡಲಾಗುತ್ತದೆ. ಇಲ್ಲಿ ತಯಾರಾಗುವ ಟೈಲ್ಸ್ ಕಡಿಮೆ ಖರ್ಚಿನಲ್ಲಿ ಹೆಚ್ಚು ಬಾಳಿಕೆ ಬರುತ್ತದೆ. ಈ ಟೈಲ್ಸ್ಗಳನ್ನು ಪಾಲಿಕೆ ಮಾತ್ರವಲ್ಲದೇ ಇತರರು ಖರೀದಿ ಮಾಡುತ್ತಿದ್ದಾರೆ.
ಪ್ಲಾಸ್ಟಿಕ್ನಿಂದ ಹೇಗೆ ಟೈಲ್ಸ್ ತಯಾರಾಗುತ್ತದೆ?: ಮೈಸೂರು ಮಹಾನಗರ ಪಾಲಿಕೆ ತನ್ನ ಕಸದ ಸಂಗ್ರಹ ಪ್ರದೇಶದಲ್ಲಿ ಜಾಗೃತ್ ಟೆಕ್ ಕಂಪನಿಗೆ ಸ್ಥಳ ನೀಡಿದ್ದು, ಅದೇ ಸ್ಥಳದಲ್ಲಿ ಕಾರ್ಖಾನೆ ಆರಂಭಿಸಿರುವ ಕಂಪನಿಗೆ ಮೈಸೂರು ನಗರದಿಂದ ಪೌರಕಾರ್ಮಿಕರು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಕವರ್ಗಳನ್ನು ಕೊಡುತ್ತಾರೆ. ತೂಕ ಆದ ನಂತರ ಪ್ಲಾಸ್ಟಿಕ್ ಕವರ್ಗಳನ್ನು ಯಂತ್ರದ ಸಹಾಯದಿಂದ ಸಣ್ಣದಾಗಿ ಕತ್ತರಿಸಿ ಪುಡಿ ಮಾಡಿಕೊಳ್ಳುತ್ತಾರೆ. ನಂತರ ಉಷ್ಣಾಂಶದ ಮುಖಾಂತರ ಪುಡಿ ಮಾಡಲಾದ ಪ್ಲಾಸ್ಟಿಕ್ ಅನ್ನು ಕರಗಿಸಿ ಬಳಿಕ ಅಚ್ಚಿನ ಮಷಿನ್ಗೆ ಹಾಕಿ, ಟೈಲ್ಸ್ ತಯಾರು ಮಾಡಲಾಗುತ್ತದೆ.