ಕರ್ನಾಟಕ

karnataka

ETV Bharat / state

ಸುಡಾನ್​ನಲ್ಲಿ ಸಿಲುಕಿರುವ ಮೈಸೂರು ಜನ: ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮನವಿ - hakki pikki community stuck in sudan

ಸುಡಾನ್ ದೇಶದಲ್ಲಿ ಸೇನಾ ಹಾಗೂ ಅರೆಸೇನಾ ಪಡೆಗಳ ಆಂತರಿಕ ಸಂಘರ್ಷ ಹಿಂಸಾರೂಪ ತಾಳಿದ್ದು, ಅಲ್ಲಿ ಸಿಲುಕಿರುವ ಮೈಸೂರು ಮೂಲದ ಜನರು ತಮ್ಮನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

mysuru based people stuck in sudan
ಸುಡಾನ್​ನಲ್ಲಿ ಸಿಲುಕಿರುವ ಮೈಸೂರು ಮೂಲದ ಜನರು

By

Published : Apr 23, 2023, 1:20 PM IST

ವಿಡಿಯೋ ಮೂಲಕ ರಕ್ಷಣೆ ಮಾಡುವಂತೆ ಮನವಿ

ಮೈಸೂರು: ಮಿಲಿಟರಿ ಸಂಘರ್ಷ ನಡೆಯುತ್ತಿರುವ ಸುಡಾನ್ ಪ್ರದೇಶದಲ್ಲಿ ಸಿಲುಕಿರುವ ಮೈಸೂರು ಮೂಲದ ಹಕ್ಕಿಪಿಕ್ಕಿ ಜನರು ತಮ್ಮನ್ನು ರಕ್ಷಣೆ ಮಾಡುವಂತೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸುವ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಅಲ್ಲಿ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಸುಡಾನ್​ನಲ್ಲಿ ಮಿಲಿಟರಿ ಮತ್ತು ಅರೆ ಮಿಲಿಟರಿ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷ ಪೀಡಿತ ಜಾಗದಲ್ಲಿ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಿವಾಸಿಗಳು ಹಾಗೂ ಹುಣಸೂರು ತಾಲೂಕಿನ ಪಕ್ಷಿರಾಜಪುರ ಹಾಗೂ ಶಂಕರಪುರದ 108 ಜನರು ಸಿಲುಕಿಕೊಂಡಿದ್ದಾರೆ. ಅವರಿಗೆ ಅಲ್ಲಿ ಆಹಾರ, ನೀರು ಸಿಗದೆ ಸಂಕಷ್ಟ ಎದುರಿಸುತ್ತಿದ್ದು, ರಕ್ಷಣೆ ಮಾಡುವಂತೆ ಭಾರತ ಸರ್ಕಾರಕ್ಕೆ ಮತ್ತು ಮೈಸೂರು ಜಿಲ್ಲಾಧಿಕಾರಿಗಳಿಗೆ ಕನ್ನಡದಲ್ಲಿ ಮನವಿ ಮಾಡಿದ್ದಾರೆ.

ವಿಡಿಯೋ ಮೂಲಕ ಮನವಿ: ಹೆಚ್ ಡಿ ಕೋಟೆ ತಾಲೂಕಿನ ಟೈಗರ್ ಬ್ಲಾಕ್​ನ ಹಕ್ಕಿ ಪಿಕ್ಕಿ ಜನಾಂಗದವರು ಸುಡಾನ್​ನ ಸಂಘರ್ಷ ಪೀಡಿತ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರೆ. ಜೀವಭಯದಿಂದ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದೇವೆ. ಇಲ್ಲಿ ನೀರು, ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕ್ಕಿದ್ದು, ನಮ್ಮನ್ನು ರಕ್ಷಣೆ ಮಾಡಿ. ಇಲ್ಲಿ ಬಾಂಬ್ ಸದ್ದು ಕೂಡ ಕೇಳಿ ಬರುತ್ತಿದೆ. ಏರ್​ಪೋರ್ಟ್​ ನಾಶವಾಗಿವೆ. ದೊಡ್ಡ ದೊಡ್ಡ ಸಿಟಿಗಳು ನಾಶವಾಗಿವೆ ಎಂದು ವಿಡಿಯೋ ಮೂಲಕ ಸಂಬಂಧ ಪಟ್ಟ ಭಾರತೀಯ ರಾಯಭಾರ ಕಚೇರಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಸುಡಾನ್‌ನಲ್ಲಿ ಮೈಸೂರಿನ ಜನರು ಸಿಲುಕಿರುವ ಶಂಕೆ: ಮಾಹಿತಿ ನೀಡಲು ಡಿಸಿ ಮನವಿ

ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ: ಸುಡಾನ್ ಸಂಘರ್ಷ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಟೈಗರ್ ಬ್ಲಾಕ್ ಹಾಡಿಯ ಜನರು, ಹುಣಸೂರು ತಾಲೂಕಿನ ಪಕ್ಷಿ ರಾಜಪುರ ಹಾಗೂ ಶಂಕರಪುರದ 108 ಹಕ್ಕಿ ಪಿಕ್ಕಿ ಜನಾಂಗದವರ ಮಾಹಿತಿ, ಪಾಸ್​ಪೋರ್ಟ್ ಹಾಗೂ ಮೊಬೈಲ್ ಸಂಖ್ಯೆಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ ವಿ.ರಾಜೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಪಿಎಂ ಮೋದಿ, ಜೈಶಂಕರ್​ ಮನವಿ: ಸುಡಾನ್​ನಿಂದ ಭಾರತೀಯರ ಸ್ಥಳಾಂತರಿಸಿದ ಸೌದಿ ಅರೇಬಿಯಾ

ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದು, ಪ್ರತಿ ವರ್ಷ ಆಯುರ್ವೇದ ಎಣ್ಣೆ ಹಾಗೂ ಮಸಾಜ್ ಪಾರ್ಲರ್ ನಡೆಸಲು ಸುಡಾನ್​ಗೆ ತೆರಳಿ ಅಲ್ಲಿ ತಿಂಗಳುಗಟ್ಟಲೇ ಇದ್ದು, ಹಣ ಸಂಪಾದನೆ ಮಾಡಿಕೊಂಡು ವಾಪಸ್ ಆಗುತ್ತಿದ್ದರು. ಕೆಲಸ ಅರಸಿ ಸುಡಾನ್​ಗೆ ತೆರಳಿದ್ದರು. ಆದರೆ, ಈಗ ಸೇನಾ ಹಾಗೂ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ಆಂತರಿಕ ಸಂಘರ್ಷದಿಂದ ಮಹಿಳೆಯರು ಹೆಚ್ಚು ಆತಂಕದಲ್ಲಿದ್ದಾರೆ. ಸುಡಾನ್​ನಲ್ಲಿ ಸಿಲುಕಿರುವ ಕನ್ನಡಿಗರಲ್ಲಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ತೆರಳಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :ಸುಡಾನ್​​ ಸೇನಾ ಸಂಘರ್ಷ.. ಸಂಕಷ್ಟದಲ್ಲಿ 31 ಕನ್ನಡಿಗರು, ನೆರವಿಗೆ ಮನವಿ

ABOUT THE AUTHOR

...view details