ಮೈಸೂರು:ಕೊಳ್ಳೇಗಾಲ ಹಾಗೂ ಟಿ.ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿ ಒಬ್ಬ ಕಾರು ಚಾಲಕ ಮತ್ತು ಮೂರು ಕುಟುಂಬಗಳ 9 ಸದಸ್ಯರು ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಮೃತರ ಕುಟುಂಬಗಳಿಗೆ ಮೋದಿ ಅವರು ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮೈಸೂರು ಭೀಕರ ಅಪಘಾತ ಸುದ್ದಿ ತಿಳಿದು ತೀವ್ರ ನೋವಾಗಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗನೇ ಗುಣಮುಖವಾಗಲಿ ಎಂದು ಪ್ರಾರ್ಥಿಸುವೆ ಜೊತೆಗೆ ಮೃತರ ಕುಟುಂಬಸ್ಥರ ಜೊತೆ ನಾವಿರುತ್ತೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಪಿಎಂಎನ್ಆರ್ಎಫ್ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ ಪರಿಹಾರವನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದರು.
ರಾಷ್ಟ್ರಪತಿ ಟ್ವೀಟ್: ಮೈಸೂರು ಅಪಘಾತದಲ್ಲಿ ಮಕ್ಕಳು ಸೇರಿ 10 ಜನ ಮೃತಪಟ್ಟ ಸುದ್ದಿ ತಿಳಿದು ತೀವ್ರ ನೋವಾಯಿತು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು ಎಂದು ರಾಷ್ಟ್ರಪತಿ ಮುರ್ಮು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!
ಮೈಸೂರಿನ ಕೆ ಆರ್ ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯವನ್ನು ಸಚಿವ ಡಾ. ಹೆಚ್ ಸಿ ಮಹದೇವಪ್ಪ ವಿಚಾರಿಸಿದರು. ಇದೇ ವೇಳೆ, ದೂರವಾಣಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮಹದೇವಪ್ಪ ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಮಹದೇವಪ್ಪ, ಅಪಘಾತದಲ್ಲಿ ಹತ್ತು ಮಂದಿ ಮೃತಪಟ್ಟಿರುವುದು ಮನಸ್ಸಿಗೆ ನೋವಾಗಿದೆ. ಈಗಾಗಲೇ ಸರ್ಕಾರ ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ. ಇಂದು ರಾತ್ರಿಯೇ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಬೆಳಗಿನ ಜಾವ ಮೃತದೇಹಗಳನ್ನು ಬಳ್ಳಾರಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಪ್ರವಾಸಕ್ಕೆ ತೆರಳಿದ್ದವರ ಬದುಕಿನ ಪಯಣ ಅಂತ್ಯ: ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದಿಂದ ಮೇ 27 ರಂದು ಮೂರು ಕುಟುಂಬಗಳ 12 ಸದಸ್ಯರು ಮೈಸೂರು ಪ್ರವಾಸಕ್ಕೆ ರೈಲಿನಲ್ಲಿ ತೆರಳಿದ್ದರು. ಇಂದು ವಾಪಸ್ ಊರಿಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಕಾರಲ್ಲಿ ಹೋಗುವಾಗ ದುರಂತ ಸಂಭವಿಸಿದೆ. ಸಂದೀಪ್ (24), ಅವರ ತಂದೆ ಕೊಟ್ರೇಶ್(45), ತಾಯಿ ಸುಜಾತಾ (40) ಹಾಗೂ ಇನ್ನೊಂದು ಕುಟುಂಬದ ಮಂಜುನಾಥ (35), ಪತ್ನಿ ಪೂರ್ಣಿಮಾ(30), ಮಕ್ಕಳಾದ ಕಾರ್ತಿಕ್ (08), ಪವನ್ (10) ಮತ್ತು ಮತ್ತೊಂದು ಕುಟುಂಬದ ಗಾಯತ್ರಿ(35), ಮಗಳು ಶ್ರಾವ್ಯ(3), ಕಾರು ಚಾಲಕ ಆದಿತ್ಯ ಮೃತಪಟ್ಟವರು. ಜನಾರ್ದನ, ಅವರ ಮಗ ಪುನೀತ್ ಮತ್ತು ಶಶಿಕುಮಾರ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು: ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ.. 10 ಮಂದಿ ಸಾವು, ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ