ಮೈಸೂರು:ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್ ಫುಡ್‌ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್‌ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್.
ಮೈಸೂರಿಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗನೂ ಕೂಡಾ ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆಯ ಕಾರ್ನರ್ನಲ್ಲಿ ಮೂಲ ಮೈಸೂರು ಪಾಕ್ ದೊರೆಯುವ ಗುರು ಸ್ವೀಟ್ಸ್ನಲ್ಲಿ ಸರತಿ ಸಾಲಿನಲ್ಲಿ ನಿಂತು, ಮೈಸೂರು ಪಾಕ್ ಕೊಂಡುಕೊಳ್ಳದೇ ಇರಲಾರ. ಇಲ್ಲಿ ಈ ದೃಶ್ಯವನ್ನೂ ನೀವು ಇವತ್ತಿಗೂ ಕೂಡ ಕಾಣಬಹುದು. ಇಂತಹ ಮೈಸೂರು ಪಾಕ್‌ಗೆ ಟೇಸ್ಟಿ ಅಟ್ಲಾಸ್ನ ಸರ್ವೇಯಲ್ಲಿ 4.4 ರೇಟಿಂಗ್ ದೊರೆತಿದೆ.
ಮೈಸೂರ್ ಪಾಕ್ ಉಗಮ:ದೇಶ-ವಿದೇಶಗಳಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಮೈಸೂರ್ ಪಾಕ್ ಸಿಹಿ ಜನ್ಮ ತಾಳಿದ ರೀತಿಯೇ ವಿಶೇಷವಾಗಿದೆ. 1934ರಲ್ಲಿ ಮೈಸೂರಿನ ಒಡೆಯರ್ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಸ್ಥಾನಕ್ಕೆ ವಿದೇಶಿಗರು ಆಗಮಿಸಿದಾಗ, ಅರಮನೆಯ ಅಡುಗೆ ಭಟ್ಟರಾಗಿದ್ದ ಕಾಕಾಸುರ ಮಾದಪ್ಪನವರಿಗೆ ಸಿಹಿತಿಂಡಿ ಮಾಡಲು ಸೂಚಿಸಿದ್ದರಂತೆ. ಆಗ ಅಡುಗೆ ಭಟ್ಟ ಕಾಕಾಸುರ ಮಾದಪ್ಪ ಬೆಣ್ಣೆ ಕಾಯಿಸಿದ ತುಪ್ಪದಿಂದ ಈ ತಿಂಡಿಯನ್ನು ತಯಾರಿಸಲು ನಿರ್ಧರಿಸುತ್ತಾರೆ. ಶುದ್ಧ ಕಡಲೆ ಹಿಟ್ಟಿಗೆ ಹದವಾಗಿ ಕಾಯಿಸಿದ ತುಪ್ಪ, ಬೆಲ್ಲ, ಅಡುಗೆ ಅರಿಶಿಣ ಹಾಗೂ ಏಲಕ್ಕಿ ಬೆರೆಸಿ ಹದ ಪಾಕದೊಂದಿಗೆ ಸಿಹಿತಿಂಡಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ಗೆ ನೀಡಿದರು. ಒಡೆಯರ್ ಈ ತಿಂಡಿಯನ್ನು ತಿಂದು ಸಂತಸಪಟ್ಟು, ಇದಕ್ಕೆ 'ಮೈಸೂರು ಪಾಕ್' ಎಂದು ನಾಮಕರಣ ಮಾಡಿದರು ಎನ್ನುವುದು ಇತಿಹಾಸ.