ಮೈಸೂರು: ಪಿಯುಸಿ ಫಲಿತಾಂಶ ಹೆಚ್ಚಾಗಿರುವುದರಿಂದ ಪದವಿ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಮೈಸೂರು ವಿವಿ ಸಿದ್ಧವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚುವರಿ ಪದವಿ ತರಗತಿ ತೆರೆಯಲು ಮೈಸೂರು ವಿವಿ ಸಿದ್ಧ ಈಟಿವಿ ಭಾರತ ಜೊತೆ ಮಾತನಾಡಿದ ಮೈಸೂರು ವಿವಿ ಕುಲಪತಿಗಳು, ಈ ವರ್ಷ ಪಿಯುಸಿ ಫಲಿತಾಂಶ ಹೆಚ್ಚಾಗಿದ್ದು, ಪದವಿ ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಖಾಸಗಿ ಕಾಲೇಜುಗಳು ಸೇರಿ 220 ಕಾಲೇಜುಗಳಿವೆ. ಕಾಲೇಜಿಗೆ ದಾಖಲಾತಿ ಹೆಚ್ಚಿನ ಬೇಡಿಕೆ ಬಂದರೆ, ಹೆಚ್ಚುವರಿ ಸೀಟುಗಳನ್ನು ನೀಡಲು ಸಿದ್ದವಾಗಿದ್ದೇವೆ ಎಂದರು.
ಈ ವರ್ಷ ಅಂದಾಜು 2 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ಪದವಿ ತರಗತಿಗಳಿಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಪ್ರತಿವರ್ಷ ಮೈಸೂರು ವಿವಿಯ ಪದವಿ ತರಗತಿಗಳಿಗೆ 20 ಸಾವಿರ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ ಈ ವರ್ಷ 5 ಸಾವಿರ ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ದಾಖಲಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ಹೆಚ್ಚು ಸೀಟುಗಳನ್ನು ಕೊಡಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 1 ರಿಂದ ಮೊದಲ ವರ್ಷದ ಪದವಿ ತರಗತಿಗಳು ಆರಂಭವಾಗಲಿದೆ ಎಂದು ಹೇಮಂತ್ ಕುಮಾರ್ ಮಾಹಿತಿ ನೀಡಿದರು.
ಇದೇ ಭಾನುವಾರ ಕೆ-ಸೆಟ್ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಯ 12 ಕೇಂದ್ರಗಳಲ್ಲಿ ಸುಮಾರು 85 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋಧಕರ ನೇಮಕಾತಿ ಸರ್ಕಾರ ವಾಪಸ್ ಪಡೆದಿದ್ದು, ಪುನಃ ಆ ಹುದ್ದೆಗಳಿಗೆ ಅನುಮತಿ ನೀಡುವಂತೆ ಕೇಳಲಾಗುವುದು. ಜೊತೆಗೆ ನ್ಯಾಕ್ ಮಾನ್ಯತೆ ಪಡೆಯಲು ಎಲ್ಲಾ ರೀತಿಯ ಸಿದ್ದತೆ ನಡೆಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್ ಸಂಪೂರ್ಣ ಹಸಿರಾಗಿದೆ ಎಂದು ಕುಲಪತಿ ಹೇಳಿದರು.
ಇದನ್ನೂ ಓದಿ: ನಾನು ನಾನು ಅನ್ನುವವರು ಯಾರೂ ಸಿಎಂ ಆಗುವುದಿಲ್ಲ: ಆರ್.ಅಶೋಕ್