ಮೈಸೂರು:ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಆತಂಕಗೊಂಡಿದ್ದು, 'ಈಟಿವಿ ಭಾರತ'ದೊಂದಿಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿರುವ ಆಫ್ಘನ್ ವಿದ್ಯಾರ್ಥಿಗಳಲ್ಲಿ ಆತಂಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 90 ಮಂದಿ ಆಫ್ಘನ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎರಡು ದಶಕಗಳ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿದ್ದು, ಈ ಸಂದರ್ಭದಲ್ಲಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಅಲ್ಲಿನ ಪರಿಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾರೆ. ತಮ್ಮ ಕುಟುಂಬದವರ ಜೊತೆ ಮಾತನಾಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ಜೊತೆಗೆ ಕುಲಪತಿ ಅವರನ್ನು ಭೇಟಿಯಾಗಿ ವೀಸಾ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ' ಜೊತೆ ತಮ್ಮ ದೇಶದ ಸ್ಥಿತಿಯ ಬಗ್ಗೆ ವಿದ್ಯಾರ್ಥಿ ರೈಜಾ ಮಾತನಾಡಿ, ''ನಾನು 6 ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಇದು ನನ್ನ ಕಡೆಯ ವರ್ಷದ ವ್ಯಾಸಂಗ. ಇದನ್ನು ಮುಗಿಸಿ ವಾಪಸ್ ಅಫ್ಘಾನಿಸ್ತಾನಕ್ಕೆ ಹೋಗಬೇಕಿತ್ತು. ಆದರೆ ಅಲ್ಲಿ ಪರಿಸ್ಥಿತಿ ಈಗ ಸರಿಯಿಲ್ಲ. ಅಲ್ಲಿರುವವರ ಮಾನಸಿಕ ನೆಮ್ಮದಿ ಹದೆಗೆಟ್ಟಿದೆ. ತುಂಬಾ ಆತಂಕದ ವಾತಾವರಣ ಇದೆ. ಶಾಪ್ ಮತ್ತು ಶಾಲೆಗಳು ಮುಚ್ಚಿವೆ. ಕಾಬೂಲ್ನಲ್ಲಿ ಸ್ಥಿತಿ ಚೆನ್ನಾಗಿಲ್ಲ. ನಮ್ಮ ಪೋಷಕರು ಕ್ಯಾಪಿಟಲ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ. ಅವರಿಗೆ ದೈಹಿಕವಾಗಿ ಯಾವುದೇ ನೋವಾಗಿಲ್ಲ. ಆದರೆ ಮಾನಸಿಕವಾಗಿ ಎಲ್ಲರೂ ನೋವನ್ನು ಅನುಭವಿಸುತ್ತಿದ್ದಾರೆ''ಎಂದ್ರು.
ಅಫ್ಘಾನಿಸ್ತಾನದ ಪರಿಸ್ಥಿತಿ ತುಂಬಾ ದುಃಖಕರವಾಗಿದೆ. ವಿಮಾನ ಹತ್ತಲು ಜನ ಹೋಗುತ್ತಿರುವ ದೃಶ್ಯ ಅಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಡುತ್ತಿದೆ. ಪ್ರಪಂಚದ ಎಲ್ಲಾ ದೇಶಗಳು ಆಫ್ಘನ್ ಗೆ ಬೆಂಬಲ ನೀಡಬೇಕು. ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೀಸಾ ಅವಧಿ ಮುಂದುವರೆಸಬೇಕು ಎಂದು ವಿದ್ಯಾರ್ಥಿ ರೈಜಾ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾನೆ.
ಅಭಯ ನೀಡಿದ ಮೈಸೂರು ವಿವಿ ಕುಲಪತಿ:
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಧೈರ್ಯ ತುಂಬಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 52 ದೇಶದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 90 ಮಂದಿ ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿದ್ದು, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಭಯದಲ್ಲಿದ್ದಾರೆ. ಈ ಹಿನ್ನೆಲೆ ಇಂದು ಈ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಕುಲಪತಿಗಳು ಆಫ್ಘನ್ ವಿದ್ಯಾರ್ಥಿಗಳಿಗೆ ಚಿಂತೆ ಮಾಡದಂತೆ ಧೈರ್ಯ ಹೇಳಿದ್ದಾರೆ.
ಅಫ್ಘಾನ್ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಮೈಸೂರು ವಿವಿ ಕುಲಪತಿ ''ವಿದ್ಯಾರ್ಥಿಗಳ ಕುಟುಂಬದ ಜೊತೆ ಸಹ ಸಂಪರ್ಕದಲ್ಲಿ ಇದ್ದು, ಅವರಿಗೆ ಯಾವುದೇ ರೀತಿ ತೊಂದರೆಯಾಗದ ರೀತಿಯಲ್ಲಿ ಆತ್ಮಸ್ಥೈರ್ಯ ತುಂಬಿದ್ದೇನೆ. ಜೊತೆಗೆ ಪರೀಕ್ಷೆಯ ಕಡೆ ಗಮನ ಹರಿಸುವಂತೆ ತಿಳಿಸಿದ್ದೇನೆ. ಕೆಲವು ವಿದ್ಯಾರ್ಥಿಗಳ ವೀಸಾ ಮುಗಿಯಲಿದ್ದು, ಅವರಿಗೆ ವೀಸಾ ವಿಸ್ತರಣೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಜೊತೆ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರವು ಈಗಾಗಲೇ ವೀಸಾ ವಿಸ್ತರಣೆ ಬಗ್ಗೆ ಹೇಳಿದೆ'' ಎಂದು ಮೈಸೂರು ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದರು.