ಮೈಸೂರು: ನಗರ ಪೊಲೀಸರು ವಷಾಂತ್ಯದಲ್ಲಿ ಭರ್ಜರಿ ಬೇಟೆ ಆಡಿದ್ದು, ವಿವಿಧ ಪ್ರಕರಣಗಳಿಂದ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ನಗರದಲ್ಲಿ ಗಾಂಜಾ, ಛರಸ್ ಮಾರಾಟ, ಮನೆ ಕಳ್ಳತನ ಮತ್ತು ಮಟ್ಕಾ ದಂಧೆ ಮಾಡುತ್ತಿದ್ದವರಿಗೆ ಬೇಡಿ ತೊಡಿಸಿದ್ದಾರೆ.
ಡಿ.15ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಉದಯಗಿರಿ ಠಾಣಾ ವ್ಯಾಪ್ತಿಯ ರಾಜೀವ್ ನಗರ 2ನೇ ಹಂತದ ಸೈಯದ್ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ ಅಂದಾಜು ರೂ. 70 ಸಾವಿರ ರೂ. ಮೌಲ್ಯದ 1 ಕೆ.ಜಿ. 160 ಗ್ರಾಂ ಗಾಂಜಾ, ತೂಕದ ಯಂತ್ರ, 1,850 ನಗದು ಹಣ ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಛರಸ್ ವಶ:ಡಿ.19ರಂದು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮೈಸೂರು ನಗರ ಆಲನಹಳ್ಳಿ ಠಾಣಾ ವ್ಯಾಪ್ತಿಯ ತಿ. ನರಸೀಪುರ ಮುಖ್ಯರಸ್ತೆಯ ಆಲನಹಳ್ಳಿ ಕೆರೆಗೆ ಹೊಂದಿಕೊಂಡಂತೆ ಇರುವ ಅರಳಿಮರದ ಬಳಿ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ ಅಂದಾಜು 3.50 ಲಕ್ಷ ರೂ.ಮೌಲ್ಯದ 126 ಗ್ರಾಂ ಛರಸ್, ತೂಕದ ಯಂತ್ರ ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ದಂಧೆ 9 ಜನರ ಬಂಧನ:ಮಟ್ಕಾ ದಂಧೆ ನಡೆಸುತ್ತಿದ್ದ ಒಟ್ಟು 9 ಆರೋಪಿಗಳ ಬಂಧಿಸಿ, 33,330 ರೂ.ನಗದು ಮತ್ತು ದಾಖಲಾತಿಗಳು ವಶ ಪಡಿಸಿಕೊಳ್ಳಲಾಗಿದೆ. ಡಿ.12ರಂದು ಉದಯಗಿರಿ ಠಾಣಾ ವ್ಯಾಪ್ತಿಯ ಗೌಸಿಯಾನಗರದ ಸಿ ಬ್ಲಾಕಕ್ನ ಸುಲ್ತಾನ್ ರಸ್ತೆಯಲ್ಲಿರುವ ಖದೀರ್ ಕೇರಂ ಬೋರ್ಡ್ ಕ್ಲಬ್ ಮುಂಭಾಗ ಮಟ್ಕಾ ದಂಧೆ ನಡೆಸುತ್ತಿದ್ದ 4 ಆರೋಪಿಗಳನ್ನು ಬಂಧಿಸಿ 18,110 ರೂ. ನಗದು ಹಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.