ಮೈಸೂರು: ಪಾರಂಪರಿಕ ನಗರಿ ಮೈಸೂರಿನಲ್ಲಿ ಟಾಂಗಾಗಳಿಗೆ ತನ್ನದೇ ಆದ ಮಹತ್ವವಿದೆ. ಈ ಪಾರಂಪರಿಕ ಟಾಂಗಾಗಳು ರಾಜ ಮಹಾರಾಜರ ಕೊಡುಗೆ. ಇವುಗಳನ್ನು ನಂಬಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಈ ಟಾಂಗಾವಾಲಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳೇನು?, ಈ ಬಗ್ಗೆ ಸರ್ಕಾರದಿಂದ ಅವರು ನಿರೀಕ್ಷೆ ಮಾಡುತ್ತಿರುವುದು ಏನು? ಎಂಬ ಬಗ್ಗೆ ಟಾಂಗಾವಾಲ ಸಂಘದ ಅಧ್ಯಕ್ಷ ಫಯಾಜ್ ಅಹ್ಮದ್ ವಿವರಿಸಿದ್ದಾರೆ.
ಸಮಸ್ಯೆ ಬಗೆಹರಿಸುವಂತೆ ಮನವಿ: ದಸರಾ ಪ್ರಾರಂಭಕ್ಕೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ. ಈಗಾಗಲೇ ದಸರಾ ಗಜಪಯಣದ ಸಿದ್ದತೆ ಆರಂಭವಾಗಿವೆ. ಈ ಮಧ್ಯೆ ಮೈಸೂರು ಪಾರಂಪರಿಕ ಟಾಂಗಾವಾಲಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಮಸ್ಯೆಗಳ ಬಗ್ಗೆ ಫಯಾಜ್ ಅಹ್ಮದ್ ಹೇಳಿದಿಷ್ಟು..:ಈ ಬಗ್ಗೆ "ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮೈಸೂರು ಟಾಂಗಾ ಅಸೋಶಿಯೇಷನ್ ಅಧ್ಯಕ್ಷ ಫಯಾಜ್ ಅಹ್ಮದ್ "ಮೈಸೂರು ನಗರದಲ್ಲಿ 25 ಸಾರೋಟು ಹಾಗೂ 125 ಟಾಂಗಾಗಳಿವೆ. 2010ರಲ್ಲಿ ಕೇಂದ್ರ ಸರ್ಕಾರದ 'ನರ್ಮ್ ಯೋಜನೆ'ಯಡಿ 3 ಕುದುರೆ ನಿಲ್ದಾಣಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯಲ್ಲಿವೆ. ಅವುಗಳಲ್ಲಿ ಕುಕ್ಕರಹಳ್ಳಿ ಕೆರೆ, ಗ್ರಾಮಾಂತರ ಬಸ್ ನಿಲ್ದಾಣ, ಆರ್ಎಂಸಿ ಬಸ್ ನಿಲ್ದಾಣದ ಬಳಿ ಹಾಗೂ ಅಗ್ರಹಾರ ಬಳಿ ಟಾಂಗಾ ನಿಲ್ಧಾಣಗಳಿವೆ. ಈ ನಿಲ್ದಾಣಗಳು ಕಳೆದ 13 ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ಹದಗೆಟ್ಟಿವೆ. ನೆಲಹಾಸು ಸರಿಯಾಗಿಲ್ಲ. ಕುದುರೆಗಳಿಗೆ ನೀರು ಕುಡಿಯಲು ಟ್ಯಾಂಕ್ಗಳಿಲ್ಲ. ಕುದುರೆಗಳು ಅನಾರೋಗ್ಯಕ್ಕೀಡಾದರೆ ಅವುಗಳನ್ನು ನೋಡಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಜತೆಗೆ ಟಾಂಗಾ ಗಾಡಿಗಳು ಮತ್ತು ಟಾಂಗಾ ನಿಲ್ದಾಣಗಳಿಗೆ ಬಣ್ಣ ಸಹ ಬಳಿಯಲಾಗಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಟಾಂಗಾವಾಲಗಳ ಬದುಕು ಕಷ್ಟವಾಗಿದೆ. ಕೂಡಲೇ ಈ ಬಾರಿ ದಸರಾ ವೇಳೆಯೊಳಗಾದರೂ ಸಮಸ್ಯೆಗಳನ್ನು ಬಗೆಹರಿಸಬೇಕೆಂದು" ಅವರು ಆಗ್ರಹಿಸಿದ್ದಾರೆ.