ಮೈಸೂರು: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವ 'ರಾಷ್ಟ್ರಮಟ್ಟದ ಕಲೋತ್ಸವ' ಸ್ಪರ್ಧೆಗೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಭವ್ಯ ಆಯ್ಕೆಯಾಗಿದ್ದಾರೆ.
ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಅದರ ವೈವಿಧ್ಯತೆಯನ್ನು ಕಲೆಯ ಮೂಲಕ ಶಾಲಾ ಮಕ್ಕಳಿಗೆ ಅರ್ಥೈಸಲು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಈ ಹಿನ್ನೆಲೆ 2021-22ನೇ ಸಾಲಿನಲ್ಲಿ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವರ್ಚುವಲ್ ಆಗಿ ನಡೆದ ರಾಜ್ಯಮಟ್ಟದ ಕಲೋತ್ಸವ ಸ್ಪರ್ಧೆಗೆ ಭಾಗವಹಿಸಿ ದೃಶ್ಯಕಲಾ 3D ವಿಭಾಗದಲ್ಲಿ 'ಸೋಮನಕುಣಿತ ಮುಖವಾಡ' ತಯಾರಿಸಿದ 9ನೇ ತರಗತಿ ವಿದ್ಯಾರ್ಥಿನಿ ಭವ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಈ ಮೂಲಕ 2022ನೇ ಜನವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.