ಮೈಸೂರು :ನವರಾತ್ರಿಯ ಮೊದಲ ದಿನ, ನಾಳೆ ಅಕ್ಟೋಬರ್ 15ರಂದು ಅರಮನೆಯಲ್ಲಿ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. ಮೊದಲ ದಿನ ರತ್ನ ಖಚಿತ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಪೂಜೆ ಸಲ್ಲಿಸಿದ ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಹೀಗೆ 10 ದಿನಗಳ ಕಾಲ ರಾಜವಂಶಸ್ಥರು ಸಾಂಪ್ರದಾಯಿಕ ಪೂಜಾ ಕಾರ್ಯ ನೆರವೇರಿಸಲಿದ್ದು, ಈ ಬಗ್ಗೆ ವಿವರ ಇಲ್ಲಿದೆ.
ಒಂದು ಕಡೆ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಚಾಮುಂಡಿ ಬೆಟ್ಟದಲ್ಲಿ ಅರಮನೆಯ ಆವರಣದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಮತ್ತೊಂದೆಡೆ ರಾಜವಂಶಸ್ಥರ ಶರನ್ನವರಾತ್ರಿಯ ಪೂಜಾ ಕಾರ್ಯಕ್ಕೆ ಅರಮನೆಯೊಳಗೆ ತಯಾರಿ ನಡೆದಿವೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳ ಸಿದ್ಧತೆ ನಡೆದಿದೆ. ಈಗಾಗಲೇ ಅಕ್ಟೋಬರ್ 9ರಂದು ಖಾಸಗಿ ದರ್ಬಾರ್ ಹಾಲ್ನಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಆಗಿದೆ.
ನಾಳೆ ಅ. 15ರಂದು ನವರಾತ್ರಿಯ ಮೊದಲ ದಿನ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ 06.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಆಗಲಿದೆ. ಅರಮನೆಯ ಒಳಗೆ ಗಣಪತಿ ಹೋಮ, ಚಾಮುಂಡಿ ಹೋಮ ಸೇರಿದಂತೆ ಹಲವು ಪೂಜೆ ನಡೆಯಲಿದೆ. ಬೆಳಗ್ಗೆ 07:05ರಿಂದ 07:45ರ ನಡುವಿನ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಅವರಿಗೆ ಅರಮನೆ ಒಳಗಿನ ವಾಣಿವಿಲಾಸ ಅರಮನೆಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ.
ಯಧುವೀರ್ ಖಾಸಗಿ ದರ್ಬಾರ್:ಭಾನುವಾರ ಬೆಳಗ್ಗೆ 09.45 ಗಂಟೆ ವೇಳೆಗೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿವೆ. 10.45ಕ್ಕೆ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, 11.30ರಿಂದ 11.50ಕ್ಕೆ ಖಾಸಗಿ ದರ್ಬಾರ್ನಲ್ಲಿ ರತ್ನಖಚಿತ ಸಿಂಹಾಸನವೇರಿ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬಳಿಕ 01.45ರಿಂದ 02.05ರ ವರೆಗೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಗುತ್ತದೆ. ಹೀಗೆ ಮೊದಲ ದಿನ ಅರಮನೆಯಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆ ನೆರವೇರಲಿದೆ. ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆ ಹಾಗೂ ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳ ನಡುವೆ ಸಾಮ್ಯತೆ ಇದೆ.
ನವರಾತ್ರಿಯ ಇತರ ದಿನಗಳಲ್ಲಿ ನಡೆಯುವ ಪೂಜೆಗಳ ವಿವರ:ಅಕ್ಟೋಬರ್ 20ರ ಶುಕ್ರವಾರ ಬೆಳಗ್ಗೆ 10.05ರಿಂದ 10.25ರ ವೇಳೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ಯದುವೀರ್ ಅವರು ಪೂಜೆ ಸಲ್ಲಿಸುತ್ತಾರೆ. ಬಳಿಕ ಅಕ್ಟೋಬರ್ 21ರಂದು ಕಾಳರಾತ್ರಿ ಪೂಜೆ ಹಾಗೂ 22ರಂದು ದುರ್ಗಾಷ್ಠಮಿಯಂದು ವಿವಿಧ ಪೂಜೆ ನೆರವೇರಲಿದೆ.