ಮೈಸೂರು :ಕೊರೊನಾದಂತಹ ಸಂದರ್ಭದಲ್ಲೂ ಮೈಸೂರು ಮಹಾನಗರ ಪಾಲಿಕೆ ಕಳೆದ ಎರಡೂವರೆ ತಿಂಗಳಲ್ಲಿ ದಾಖಲೆಯ42 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ.
ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಕೊರೊನಾ ಹರಡುವಿಕೆ ತಡೆಗೆ ಅನೇಕ ಕ್ರಮ ತೆಗೆದುಕೊಂಡಿವೆ. ಇದರ ನಡುವೆಯೂ ಕರ ವಸೂಲಿ ಮಾಡಿದ್ದು, ಸುಮಾರು 42 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಸಾರ್ವಜನಿಕರು 2020 ಮೇ 1ರಿಂದ ಜುಲೈ 14ರವರೆಗೆ ಎರಡೂವರೆ ತಿಂಗಳಲ್ಲಿ 42.22 ಕೋಟಿ ರೂಪಾಯಿ ತೆರಿಗೆ ಪಾವತಿಯಾಗಿದೆ. ಜುಲೈ 16ರಂದು ಒಂದೇ ದಿನ 978 ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 58,97,424 ರೂ. ಸಂಗ್ರಹಿಸಲಾಗಿದೆ. ಇದಕ್ಕೆ ಪಾಲಿಕೆ ನೀಡಿದ ತೆರಿಗೆ ವಿನಾಯಿತಿ ಹಾಗೂ ಆನ್‌ಲೈನ್ ತೆರಿಗೆ ಪಾವತಿ ಜಾರಿಗೊಳಿಸಿದ್ದೇ ಕಾರಣ.
ಮಹಾನಗರ ಪಾಲಿಕೆಯ ಕಾರ್ಯತಂತ್ರ :ಪಾಲಿಕೆ ಅನುಸರಿಸುತ್ತಿರುವ ನಿಯಮದಂತೆ ಜುಲೈ31ರೊಳಗೆ ತಮ್ಮ ವಾರ್ಷಿಕ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಪಾಲಿಕೆ ಶೇ.5ರಷ್ಟು ರಿಯಾಯಿತಿ ನೀಡಿತ್ತು. ಕಳೆದ ಏಪ್ರಿಲ್ 1 ರಿಂದ 30ರವರೆಗೆ ಶೇ.5ರಷ್ಟು ರಿಯಾಯಿತಿ ನೀಡಿತ್ತು. ಆದರೆ, ಕೊರೊನಾ ಲಾಕ್ಡೌನ್ ಹಾಗೂ ಇತರ ಕಾರಣದಿಂದಾಗಿ ಪಾಲಿಕೆ ರಿಯಾಯಿತಿಯನ್ನು ಜುಲೈ 31ರವರೆಗೆ ವಿಸ್ತರಣೆ ಮಾಡಿತ್ತು. ಸಾರ್ವಜನಿಕರು ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ಅವಕಾಶ ನೀಡಿದ್ದರಿಂದ ಆಸ್ತಿ, ನೀರಿನ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸಲು ಸಾಧ್ಯವಾಗಿದೆ.
ತೆರಿಗೆಯಲ್ಲಿ ವಿನಾಯತಿ ಕೋರಿದ ವ್ಯಾಪಾರಸ್ಥರು :ಕಳೆದ ವರ್ಷ 2019, ಜುಲೈ31ರಲ್ಲಿ ಸುಮಾರು 85 ಕೋಟಿ ಸಂಗ್ರವಾಗಿತ್ತು. ಏಪ್ರಿಲ್ 1ರಿಂದ 30ರವರೆಗೆ ಶೇ.5ರಷ್ಟು ರಿಯಾಯಿತಿ ಜಾರಿಯಲ್ಲಿದ್ದಾಗ ಎಂಸಿಸಿ ತೆರಿಗೆಯಾಗಿ ₹56 ಕೋಟಿ ಆದಾಯ ಸಂಗ್ರಹಿಸಿತ್ತು. ಈ ಬಾರಿ ಕೊರೊನಾದ ಕಾರಣದಿಂದ ಸ್ವಲ್ಪ ಹಿನ್ನಡೆಯಾಗಿದೆ. ಮಾಲ್, ಹೋಟೆಲ್, ಲಾಡ್ಜ್ ಸೇರಿ ಕಟ್ಟಡ ಮಾಲೀಕರು ಕೊರೊನಾದಿಂದಾಗಿ ವ್ಯಾಪಾರ, ವಹಿವಾಟು ನಡೆದಿಲ್ಲ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ಪಾವತಿಸಿಲ್ಲ. ಕೊರೊನಾ ಅವಧಿಯ ತೆರಿಗೆ ವಿನಾಯಿತಿ ನೀಡುವಂತೆ ಪಾಲಿಕೆಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದರೆ, ಈ ವಿಚಾರ ಸರ್ಕಾರದಿಂದ ತೀರ್ಮಾನಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.