ಮೈಸೂರು:ಯುಪಿಎಸ್ಸಿ ಪರೀಕ್ಷೆ(UPSC Exam Result)ಯಲ್ಲಿ ಸಾಂಸ್ಕೃತಿಕ ನಗರಿಯ ನಿಶ್ಚಯ್ ಪ್ರಸಾದ್ ಯಾವುದೇ ಕೋಚಿಂಗ್ ಪಡೆಯದೇ 130ನೇ ರ‍್ಯಾಂಕ್ ಪಡೆದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿರುವ ರಾಜ್ಯದ 53 ಅಭ್ಯರ್ಥಿಗಳಲ್ಲಿ ಮೈಸೂರಿನ ನಿಶ್ಚಯ್ ಪ್ರಸಾದ್ 130ನೇ ರ‍್ಯಾಂಕ್ ಗಳಿಸಿ ಮೈಸೂರಿನ ಗರಿಮೆ ಹೆಚ್ಚಿಸಿದ್ದಾರೆ.
ನಿಶ್ಚಯ್, ಕೆ.ಎಂ. ಪ್ರಸಾದ್ ಹಾಗೂ ಬಿ.ಪಿ. ಗಾಯಿತ್ರಿ ದಂಪತಿಯ ಪುತ್ರನಾಗಿದ್ದು, ಮರಿಮಲ್ಲಪ್ಪ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ ಸಿ ಯಲ್ಲಿ 625 ಕ್ಕೆ 621ಅಂಕ ಹಾಗೂ ಪಿಯುಸಿಯಲ್ಲಿ 600ಕ್ಕೆ 590 ಅಂಕ ಪಡೆದಿದ್ದರು. ಪ್ರಸ್ತುತ ಎಸ್ಜೆಸಿಯಲ್ಲಿ ಬಯೋಟೆಕ್ನಾಲಜಿ ವಿಷಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದಾರೆ.
ಎಲ್ಲೂ ತರಬೇತಿ ಪಡೆದಿರಲಿಲ್ಲ;
2019ರಲ್ಲಿ ಮೈಸೂರಿನ ಎಸ್ ಜೆಸಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ ಬಾರಿಯೂ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದೆ, ಆದರೆ ಅಷ್ಟೊಂದು ಗಂಭೀರವಾಗಿ ಪರಿಗಣಿಸು ಸಾಧ್ಯವಾಗಿರಲಿಲ್ಲ. ಈ ಬಾರಿ 2020ರಲ್ಲಿ ಯುಪಿಎಸ್ ಸಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಂಡು ಓದಿದೆ. ಈ ವೇಳೆ ಎಲ್ಲೂ ತರಬೇತಿಯನ್ನು ಪಡೆದಿರಲಿಲ್ಲ. ಆದರೆ ತರಬೇತಿ ಕೇಂದ್ರಗಳಲ್ಲಿ ನಡೆಯುತ್ತಿದ್ದ ಐಎಎಸ್ ಅಣುಕು ಪರೀಕ್ಷೆಗಳಿಗೆ ಹಾಜರಾಗಿದ್ದೆ, ನಿರಂತರವಾಗಿ ಓದುತ್ತಿದ್ದೆ. ಹೀಗಾಗಿ ಈ ಬಾರಿ 130ನೇ ರ‍್ಯಾಂಕ್ ಬಂದಿದೆ ಎಂದು 'ಈಟಿವಿ ಭಾರತ' ಜೊತೆ ದೂರವಾಣಿ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.