ಮೈಸೂರು:ಮೈಸೂರಿನಲ್ಲಿ ರೈಲ್ವೆ ಮ್ಯೂಸಿಯಂ ನವೀಕರಣಗೊಂಡ ನಂತರ ಮ್ಯೂಸಿಯಂ ಸೌಂದರ್ಯ ಆಸ್ವಾದಿಸಲು ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ.
ಹೌದು, ರೈಲ್ವೆ ಮ್ಯೂಸಿಯಂ ನವೀಕರಣಗೊಳ್ಳುವ ಮೊದಲು, ಮ್ಯೂಸಿಯಂ ವೀಕ್ಷಣೆಗೆ ಪ್ರತಿ ದಿನ 50ರಿಂದ 60 ಮಂದಿಯಷ್ಟೇ ಪ್ರವಾಸಿಗರು ಬರುತ್ತಿದ್ದರು. ಆದರೀಗ ನವೀಕರಣಗೊಂಡ ನಂತರ ಪ್ರತಿದಿನ 400 ರಿಂದ 500 ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಲ್ಲದೇ ಶನಿವಾರ ಹಾಗೂ ಭಾನುವಾರದಂದು ಪ್ರವಾಸಿಗರ ಸಂಖ್ಯೆ ಸಾವಿರ ದಾಟಲಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರೈಲ್ವೆ ಮ್ಯೂಸಿಯಂ ಆದಾಯವು ಹೆಚ್ಚಿದೆ.
ರೈಲ್ವೆ ಮ್ಯೂಸಿಯಂ ನವೀಕರಣಗೊಳಿಸಬೇಕು ಎಂಬ ಉದ್ದೇಶದಿಂದ 2019ರ ಮಾರ್ಚ್ನಿಂದ ಮುಚ್ಚಲಾಗಿತ್ತು. ನಂತರ ಒಂದೂವರೆ ವರ್ಷದ ಬಳಿಕ ನವೀಕರಣಗೊಂಡ ಮ್ಯೂಸಿಯಂ ಅನ್ನು ಮತ್ತೆ ಓಪನ್ ಮಾಡಲಾಗಿದ್ದು, ಸುಂದರ ಪ್ರವೇಶ ದ್ವಾರ, ಕೆಫಿಟೇರಿಯಾ, ಆಡಿಯೋ- ವಿಡಿಯೋ ದೃಶ್ಯ ಕೇಂದ್ರ, ಮಕ್ಕಳ ಆಟದ ಉದ್ಯಾನ, ಮೈಸೂರು ವಂಶಸ್ಥರಿಗೆ ಸೇರಿದ ರೈಲು, ಹಳೆಯ ಸಿಗ್ನಲ್ ದೀಪಗಳು, ಮಿನಿ ಟಾಯ್ ರೈಲು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ತುಸು ನೆಮ್ಮದಿ ತಂದಿದೆ.
1979ರಲ್ಲಿ ರೈಲ್ವೆ ಅಧಿಕಾರಿ ಪಿ.ಎಂ.ಜೋಸೆಫ್ ಅವರ ಪರಿಶ್ರಮದಿಂದ ರೈಲ್ವೆ ಮ್ಯೂಸಿಯ ಆರಂಭವಾಯಿತು. ಆದರೀಗ ನವೀಕರಣಗೊಂಡು ಪ್ರವಾಸಿಗರನ್ನು ಸೆಳೆಯುತ್ತಿದೆ.