ಮೈಸೂರು: ನಿತ್ಯದ ಅಗತ್ಯಕ್ಕೆ ಬೇಕಾದ ತರಕಾರಿ ಬೆಲೆ ಕೂಡ ದಿನೇ - ದಿನೆ ಏರಿಕೆಯಾಗುತ್ತಿದೆ. ಇಂಧನ ಬೆಲೆ ಏರುತ್ತಿರುವುದೇ ಇದಕ್ಕೆ ಮೂಲ ಕಾರಣ ಎಂದು ಮೈಸೂರು ಜನತೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕೋವಿಡ್ ಎಂಬ ಮಹಾಮಾರಿ ದೇಶಕ್ಕೆ ವಕ್ಕರಿಸಿದ ವೇಳೆಯಿಂದ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಒಂದಿಷ್ಟು ವಸ್ತುಗಳ ಬೆಲೆಯನ್ನು ಏರಿಸಿದೆ. ಕೋವಿಡ್ ಕಾರಣ ಜೀವನ ನಿರ್ವಹಣೆ ಕಷ್ಟಸಾಧ್ಯ ಎನ್ನುತ್ತಿದ್ದ ಜನರಿಗೀಗ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಎನ್ನುವಂತಾಗಿದೆ.
ಇಂಧನ ಬೆಲೆ ಏರಿಕೆ ಕುರಿತು ಸರ್ಕಾರದ ವಿರುದ್ಧ ಮೈಸೂರು ಜನತೆಯ ಆಕ್ರೋಶ! ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿರುವ ಪರಿಣಾಮ ತರಕಾರಿಗಳ ಬೆಲೆಯೂ ಸಹ ಗಗನಕ್ಕೇರುತ್ತಿದೆ ಎಂದು ಮೈಸೂರು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ 1 ಕೆಜಿ ಟೊಮೇಟೊಗೆ ಇದ್ದ 10 ರೂ. ದರ ಇದೀಗ 40 ರೂ. ಆಗಿದ್ದು, ಜನರ ಮೇಲೆ ಹೊರೆಯಾಗುತ್ತಿದೆ. ಜಮೀನಿನಿಂದ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ಸಾರಿಗೆ ಅವಶ್ಯಕವಾಗಿದ್ದು, ಇಂಧನ ಬೆಲೆ ಏರಿಕೆಯಿಂದ ಸಾರಿಗೆ ವ್ಯವಸ್ಥೆಗೆ ದುಪ್ಪಟ್ಟು ಹಣ ನೀಡಬೇಕಿದೆ. ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇದರ ನೇರ ಪರಿಣಾಮ ಸಾಮಾನ್ಯ ಜನರ ಮೇಲೆ ಬೀರುತ್ತಿದೆ ಎಂದು ರೈತ ಮುಖಂಡ ಅತಿಹಳ್ಳಿ ದೇವರಾಜು ಅಸಮಾಧಾನ ಹೊರಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:ತರಕಾರಿ ದರದ ಮೇಲೆ ಇಂಧನ ಬೆಲೆ ಎಫೆಕ್ಟ್; ಗಗನಕ್ಕೇರಿದ ರೇಟ್ನಿಂದ ಹೈರಾಣಾದ ಬೆಣ್ಣೆನಗರಿ ಜನತೆ!
ಈ ರೀತಿ ನಿತ್ಯದ ಅಗತ್ಯ ವಸ್ತುಗಳು ಏರುತ್ತಾ ಹೋದರೆ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗುತ್ತದ. ಹಾಗಾಗಿ ಕೇಂದ್ರ ಸರ್ಕಾರ ಇಂಧನದ ಬೆಲೆ ಏರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.