ಮೈಸೂರು: ಅರಮನೆ ಸಾಕಾನೆಗಳನ್ನು ಗುಜರಾತ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅರಮನೆ ಹಾಗೂ ಸರ್ಕಾರದ ನಡುವೆ ಪತ್ರ ವ್ಯವಹಾರ ನಡೆದಿದ್ದು, ಆನೆಗಳನ್ನ ಅರಮನೆಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವು ಕೇಳಿ ಬಂದಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್, ಆನೆಗಳ ನಿರ್ವಹಣೆಗಾಗಿ ನಾವು ಪ್ರತಿ ತಿಂಗಳು ಅರಮನೆ ಆಡಳಿತ ಮಂಡಳಿಗೆ ಹಣ ಭರಿಸುತ್ತೇವೆ. ಇಲ್ಲವಾದರೆ ಭಿಕ್ಷೆ ಬೇಡಿ ಆನೆಗಳನ್ನು ಉಳಿಸಿಕೊಳ್ಳುತ್ತೇವೆ, ಆದರೆ ಗುಜರಾತ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.