ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬುಧವಾರ ನಡೆಯಲಿದೆ. ಹೀಗಾಗಿ, ಮೇಯರ್ ಪಟ್ಟಕ್ಕಾಗಿ ಮೂರು ಪಕ್ಷಗಳು ಕಸರತ್ತು ನಡೆಸುತ್ತಿವೆ. ಜೆಡಿಎಸ್ನ ಮುಂದಿನ ನಡೆ ಗಮನಿಸಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ದಾಳ ಉರುಳಿಸಲು ಕಾದು ಕುಳಿತಿವೆ.
ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದುಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಮೂರು ಪಕ್ಷಗಳು ಮೇಯರ್ ಸ್ಥಾನಕ್ಕಾಗಿ ತಮ್ಮ ಪ್ರಯತ್ನ ಮುಂದುವರೆಸಿವೆ.
ಜೆಡಿಎಸ್ ನಿಲುವಿನ ಬಗ್ಗೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಿದೆ. ಈ ಬಾರಿ ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಲ್ಲದೆ, ನಗರ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಆಗಿರುವ ಮೈತ್ರಿ ಒಪ್ಪಂದದಂತೆ ಜತೆಯಾಗಿ ಹೋಗೋಣವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಸಾ.ರಾ. ಮಹೇಶ್ ರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಹೇಳಿದ್ದಾರೆ. ಆದರೂ ಒಂದು ವೇಳೆ ಜೆಡಿಎಸ್ ಒಪ್ಪದಿದ್ದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದೆ.
ಏಕಾಂಗಿಯಾಗಿ ಸ್ಪರ್ಧಿಸಲು ಒತ್ತಡ: ಕಾಂಗ್ರೆಸ್- ಜೆಡಿಎಸ್ನ ನಡೆಯನ್ನು ಗಮನಿಸುತ್ತಿರುವ ಬಿಜೆಪಿ ಅಧಿಕಾರ ಹಿಡಿಯುವ ಅವಕಾಶಕ್ಕಾಗಿ ಕಾದು ಕುಳಿತಿದೆ. ಮೈತ್ರಿಯಾಗಲಿಲ್ಲವಾದರೆ ಸಂಖ್ಯಾಬಲದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದೆ. ಜೆಡಿಎಸ್ ಗೆ ಏಕಾಂಗಿಯಾಗಿ ಸ್ಪರ್ಧಿಸಲು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಅಲ್ಲದೇ ತಟಸ್ಥವಾಗಿ ಉಳಿಯುವಂತೆ ಮಾಡಲು ಜೆಡಿಎಸ್ನ ಮನವೊಲಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.