ಮೈಸೂರು :ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯಿಂದ ಮೇಯರ್ ಆಗಿ ಶಿವಶಂಕರ್ ಹಾಗೂ ಉಪ ಮೇಯರ್ ಆಗಿ ಬಿ ರೂಪ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ ಏರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಬೆಂಬಲ ಪಡೆದು ಬಿಜೆಪಿ ಮೇಯರ್ ಸ್ಥಾನ ಅಲಕರಿಸಿದೆ. ಆದರೆ ಒಪ್ಪಂದದ ಪ್ರಕಾರ ಉಪ ಮೇಯರ್ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟು ಕೊಡಲು ಒಪ್ಪಂದ ಆಗಿತ್ತು. ಆದರೆ ಜೆಡಿಎಸ್ ಪರವಾಗಿ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ರೇಶ್ಮಾ ಭಾನು ನಾಮಪತ್ರದ ಜೊತೆ ಮೀಸಲಾತಿ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿತು. ಇದರಿಂದಾಗಿ ಬಿಜೆಪಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಮೊದಲ ಬಾರಿಗೆ ಬಿಜೆಪಿಗೆ ದಕ್ಕಿದೆ.