ಮೈಸೂರು: ಸೋಂಕಿತರಿಗೆ ಸೇವೆ ಒದಗಿಸಲು ಆಂಬ್ಯುಲೆನ್ಸ್ ಕೊರತೆ ಇದ್ದು, ಈ ಕೊರತೆಯನ್ನು ಉಪಯೋಗಿಸಿಕೊಂಡು ಕೃತಕ ಅಭಾವ ಸೃಷ್ಟಿಸಿ ಖಾಸಗಿ ಆಂಬ್ಯುಲೆನ್ಸ್ನವರು ರೋಗಿಗಳ ಬಳಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕೋವಿಡ್ ಸೋಂಕಿತರು ಭಯದಿಂದ ಆಸ್ಪತ್ರೆಗೆ ಸೇರಲು ಸೂಕ್ತ ಆಸ್ಪತ್ರೆಗಳನ್ನು ಹುಡುಕಿದರೂ ಆ ಆಸ್ಪತ್ರೆಯಲ್ಲಿ ಬೆಡ್ ಕೊರತೆ, ಆಕ್ಸಿಜನ್, ವೆಂಟಿಲೇಟರ್ ಕೊರತೆ ಒಂದು ಕಡೆಯಾದರೆ ಆಕ್ಸಿಜನ್ ಹೊಂದಿರುವ ಆಂಬ್ಯುಲೆನ್ಸ್ ಕೊರತೆ ಮತ್ತೊಂದೆಡೆ.
ಆ್ಯಂಬುಲೆನ್ಸ್ ಕೊರತೆ ಕುರಿತು ಪ್ರತಿಕ್ರಿಯೆ ಸರ್ಕಾರಿ ಆಂಬ್ಯುಲೆನ್ಸ್ ವ್ಯವಸ್ಥೆ ಕೊರತೆ ಇದ್ದು, ಇದ್ದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಆಂಬ್ಯುಲೆನ್ಸ್ ಸೇವೆಗಳು ಕೊರೊನಾ ರೋಗಿಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿಸಿ ಸಾವಿರಗಟ್ಟಲೆ ಹಣ ವಸೂಲಿ ಮಾಡುತ್ತಾರೆ. ಇವರ ಈ ವಸೂಲಿಗೆ ಯಾವುದೇ ನಿಯಂತ್ರಣ ಇಲ್ಲದ್ದಾಗಿದ್ದು, ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಕೋವಿಡ್ ಸೋಂಕಿನಿಂದ ಗುಣಮುಖರಾದ ಜಿ.ವಿ.ಸೀತಾರಾಮ್ ಆರೋಪಿಸಿದ್ದಾರೆ.
ಆಂಬ್ಯುಲೆನ್ಸ್ ಸಮಸ್ಯೆ ಬಗ್ಗೆ ಆಂಬ್ಯುಲೆನ್ಸ್ ಚಾಲಕ ವಿನೋದ್ ಕುಮಾರ್ ಮಾತನಾಡಿ, ಈಗ ಆಂಬ್ಯುಲೆನ್ಸ್ ಕೊರತೆ ಇಲ್ಲ. ನಾವು ಸೋಂಕಿತರಿಂದ ಯಾವುದೇ ಸುಲಿಗೆ ಮಾಡುತ್ತಿಲ್ಲ. ಆದರೆ ನಮಗೆ ಯಾವುದೇ ಮುನ್ನೆಚ್ಚರಿಕೆ ಸೌಲಭ್ಯಗಳನ್ನು ಸರ್ಕಾರ ನೀಡಿಲ್ಲ. ಸರ್ಕಾರ ಗುತ್ತಿಗೆ ಆಧಾರದ ಮೇಲೆ ನಮ್ಮನ್ನು ತೆಗೆದುಕೊಂಡಿದ್ದಾರೆ. ಆದರೆ ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಗಣಿ ಜಿಲ್ಲೆಯಲ್ಲಿ 2,000ಕ್ಕೂ ಹೆಚ್ಚು ಬೆಡ್ಗಳು ಲಭ್ಯ; ಕಾಡುತ್ತಿದೆ ವೆಂಟಿಲೇಟರ್ ಕೊರತೆ
ಒಟ್ಟಾರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ ಕೊರತೆ ಇದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆ ಇಲ್ಲ. ಆದರೂ ಕೋವಿಡ್ ಸಮಯದಲ್ಲಿ ಜನರ ಭಯವನ್ನು ಬಂಡವಾಳ ಮಾಡಿಕೊಂಡು ಜನರ ಬಳಿಯೇ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಕೋವಿಡ್ ಸಮಯದಲ್ಲಿ ಆಂಬ್ಯುಲೆನ್ಸ್ಗಳ ಕೃತಕ ಅಭಾವ ಸೃಷ್ಟಿಸುವುದು ಕಂಡುಬರುತ್ತಿದೆ. ಆದರೆ ಇದರ ನಿಯಂತ್ರಣಕ್ಕೆ ಯಾವುದೇ ಮಾನದಂಡ ಇಲ್ಲದಂತಾಗಿದೆ.