ಮೈಸೂರು :ತಾವೇ ಭಿಕ್ಷೆ ಬೇಡಿ ಜೀವನ ನಡೆಸುವ ಮಂಗಳಮುಖಿಯರ ಮಧ್ಯೆ ನಗರದ ಮಂಗಳಮುಖಿಯೊಬ್ಬರು ಮೊಮ್ಮಗಳನ್ನ ಸಾಕಿ ಕಿಕ್ ಬಾಕ್ಸಿಂಗ್ ಪಟುವಾಗಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈಗ ಆ ಬಾಲಕಿ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಅಕ್ರಂ ಪಾಷ ಅಲಿಯಾಸ್ ಶಬನಾ ಎಂಬುವರು ಮಂಗಳಮುಖಿಯಾಗಿದ್ದು, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಇವರ ಮೊಮ್ಮಗಳು ಬೀಬಿ ಫಾತಿಮಾ(15) ಈ ಸಾಧನೆ ಮಾಡಿದ ಬಾಲಕಿಯಾಗಿದ್ದಾರೆ. ಈ ಬಾಲಕಿಯನ್ನ ತೃತೀಯ ಲಿಂಗಿ ಸಾಕುತ್ತಿದ್ದಾರೆ.
ಬಾಲಕಿಗೆ ಕಿಕ್ ಬಾಕ್ಸಿಂಗ್ ತರಬೇತಿ ಕೊಡಿಸುತ್ತಿದ್ದು, ಕಳೆದ ವಾರ ಮಹಾರಾಷ್ಟ್ರದಲ್ಲಿ ನಡೆದ ವಾಕೋ ಇಂಡಿಯಾ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 15 ವರ್ಷದ ವಿಭಾಗದಲ್ಲಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ನಗರದ ಸಂತಾ ಅಂಥೋಣಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬೀಬಿ ಫಾತಿಮಾ, ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಳೆ. ಈಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವ ಆಶಯ ಹೊಂದಿದ್ದಾರೆ.