ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನಾ ಸ್ಥಳದಲ್ಲಿ 34ಕ್ಕೂ ಹೆಚ್ಚು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ತನಿಖೆ ಚುರುಕುಗೊಂಡಿದೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ ಚಾಮುಂಡಿ ಬೆಟ್ಟದ ತಪ್ಪಿನಲ್ಲಿರುವ ಲಲಿತಾದ್ರಿಪುರಂ ರಸ್ತೆಯ ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಬೈಕ್ನಲ್ಲಿ ತೆರಳಿದ್ದರು. ಈ ವೇಳೆ ಏಕಾಂತದಲ್ಲಿದ್ದಾಗ ಅಲ್ಲೇ ಮತ್ತೊಂದು ಕಡೆ ಮದ್ಯಪಾನ ಮಾಡುತ್ತಿದ್ದ 6 ಜನ ಯುವಕರ ಗುಂಪೊಂದು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನ ವಿಡಿಯೋ ತೆಗೆದು ಹತ್ತಿರ ಹೋಗಿ ಇವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಹಣ ಕೊಡದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ.
ಆದರೆ ಯುವಕನ ಬಳಿ ಹಣವಿಲ್ಲದ ಕಾರಣ ಆತನ ಮೇಲೆ ಹಲ್ಲೆ ಮಾಡಿ ಯುವತಿ ಮೇಲೆ ಧುರುಳರು ಸಾಮೂಹಿಕ ಅತ್ಯಾಚಾರ ಎಸಗಿರುವ ಬಗ್ಗೆ ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಸದ್ಯ ಸಂತ್ರಸ್ತೆಯ ವೈದ್ಯಕೀಯ ವರದಿ ಬಂದ ನಂತರ ಹಾಗೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸತ್ಯ ಹೊರ ಬೀಳುವ ಸಾಧ್ಯತೆ ಇದೆ.