ಮೈಸೂರು:ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಕೆಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.
ಈ ಅಮಾನವೀಯ ಪ್ರಕರಣ ಸಂಬಂಧ ತಿರುಪ್ಪೂರು ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಜೊತೆಗೆ ಬಂಧಿತ ಆರೋಪಿಗಳು ವಿಚಾರಣೆ ವೇಳೆಯಲ್ಲಿ ಮತ್ತೊಬ್ಬ ಇರುವುದಾಗಿಯೂ ಬಾಯಿ ಬಿಟ್ಟಿದ್ದಾರೆ. ಆತನ ಬಂಧನಕ್ಕೂ ಪೊಲೀಸರು ಶೋಧ ಆರಂಭಿಸಿದ್ದಾರೆ.
ಈ ಮಧ್ಯೆ ಶನಿವಾರ ಸಂಜೆ ಬಂಧಿತ ಐವರು ಆರೋಪಿಗಳನ್ನು ಮೈಸೂರಿನ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹತ್ತು ದಿನಗಳ ಕಾಲ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಈ ಆರೋಪಿಗಳಲ್ಲಿ ಕೆಲವರು ದರೋಡೆ, ಕೊಲೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದ್ದು, ಈ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅತ್ಯಾಚಾರ ನಡೆದ ಸ್ಥಳಕ್ಕೆ ಸ್ಥಳ ಮಹಜರ್ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಡಿಜಿ ಪ್ರವೀಣ್ ಸೂದ್:
ಶನಿವಾರದಿಂದ ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಇಂದು ಖಾಸಗಿ ಹೋಟೆಲ್ನಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ವಲಯ ಐಜಿಪಿ ಮಧುಕರ್ ಪವಾರ್, ಮೈಸೂರು ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಡಿಸಿಪಿ ಪ್ರವೀಣ್ ಹಾಗೂ ಗೀತಾ ಪ್ರಸನ್ನ ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಭದ್ರಪಡಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಇತ್ತೀಚಿನ ಅಪರಾಧಗಳ ಬಗ್ಗೆ ಯಾವ ರೀತಿ ತನಿಖೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಬೀಟ್ ಅನ್ನು ಹೆಚ್ಚಿಸುವಂತೆ ಡಿಜಿ ಆ್ಯಂಡ್ ಐಜಿಪಿ ಪ್ರವೀಣ್ ಸೂದ್ ಸಲಹೆ ನೀಡಿದರು.
ಸುಲಿಗೆಯೇ ಅತ್ಯಾಚಾರಿಗಳ ಗುರಿ:
ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು, ಕಳೆದ ಎರಡು ವರ್ಷಗಳಿಂದಲೂ ತಮಿಳುನಾಡಿನಿಂದ ಬಂಡೀಪಾಳ್ಯ ಮಾರುಕಟ್ಟೆಗೆ ಬಾಳೆ ಹಣ್ಣು, ತರಕಾರಿಗಳನ್ನು ಗೂಡ್ಸ್ ವಾಹನದಲ್ಲಿ ತೆಗೆದುಕೊಂಡು ಬರುತ್ತಿದ್ದ ಡ್ರೈವರ್ ಜೊತೆ ಬಂದು ಮಾರುಕಟ್ಟೆಗೆ ಆ ವಸ್ತುಗಳನ್ನು ಇಳಿಸಿ, ಅಲ್ಲಿಂದ ಹಣ ಪಡೆದು ಪಕ್ಕದ ನಿರ್ಜನ ಪ್ರದೇಶವಾದ ಲಲಿತಾದ್ರಿಪುರದ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬರುವ ಯುವಕ, ಯುವತಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ದರೋಡೆ ನಡೆಸುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇವರೆಲ್ಲ ಕೂಲಿಕೆಲಸ ಮಾಡುವ ವ್ಯಕ್ತಿಗಳಾಗಿ ಕಾಣಿಸುತ್ತಿದ್ದರು. ಹಣಕ್ಕಾಗಿ ದರೋಡೆ, ಕಳ್ಳತನ, ಅತ್ಯಾಚಾರ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗ್ತಿದೆ.
ಬಂಧನಕ್ಕೆ ಸುಳಿವು ನೀಡಿದ ತಮಿಳು ಭಾಷೆ:
ಇವರ ಬಂಧನಕ್ಕೆ ಸಂತ್ರಸ್ತೆಯ ಸ್ನೇಹಿತ ನೀಡಿದ ಸುಳಿವು ಅಂದರೆ ಆರೋಪಿಗಳು ತಮಿಳಿನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದು ನೆರವಾಗಿದೆ. ಆ ಸಂದರ್ಭದಲ್ಲಿ ಆ ಲೊಕೇಶನ್ನಲ್ಲಿ ತಮಿಳುನಾಡು ಸಿಮ್ ಹೊಂದಿರುವ ಮೊಬೈಲ್ ಲೊಕೇಶನ್ ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಚಾಮರಾಜನಗರದ ಗಡಿ ಭಾಗ ಹಾಗೂ ತಮಿಳುನಾಡಿನ ತಿರುಪ್ಪೂರು ಸುತ್ತಮುತ್ತ ಗ್ರಾಮಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡು ಕಾಡಿನೊಳಗೆ ಹೋಗಿದ್ದಾನೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೈಸೂರಿನ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಪೊಲೀಸರು ಶೀಘ್ರವಾಗಿ ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಹಾಗೂ ದೂರು ದಾಖಲಿಸಿಲ್ಲ. ಇದು ಪೊಲೀಸರ ತನಿಖೆಗೆ ಹಿನ್ನಡೆಯಾಗಿದ್ದು, ಸಂತ್ರಸ್ತೆಯನ್ನು ಪೊಲೀಸರು ಮನವೊಲಿಸಲು ಯತ್ನಿಸುತ್ತಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಎಲ್ಲಾ ರೀತಿಯ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ಮತ್ತಷ್ಟು ಸಾಕ್ಷಿಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಜೊತೆಗೆ ಬಂಧಿತ ಆರೋಪಿಗಳನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.