ಬೆಂಗಳೂರು:ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ ಕ್ರಮ ಪ್ರಶ್ನಿಸಿ, ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೆಟ್ಟಿಲೇರಿದ್ದಾರೆ. ಇದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಮೈಸೂರು ಡಿಸಿ ರೋಹಿಣಿಗೆ ಸಂಕಷ್ಟ: ಸಿಎಟಿ ಮೆಟ್ಟಿಲೇರಿದ ಶರತ್, ಸರ್ಕಾರಕ್ಕೆ ನೋಟಿಸ್ - Mysore former DC B.Sharat question his Transfer
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಬಿ. ಶರತ್ ಅವರು ತಮ್ಮನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಿಎಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ.
ತಿಂಗಳ ಹಿಂದಷ್ಟೇ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿದ್ದ ಸರ್ಕಾರ ಸೂಕ್ತ ಕಾರಣ ನೀಡದೆಯೇ ತಮ್ಮನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿದೆ. ಆಡಳಿತಾತ್ಮಕ ನಿಯಮಗಳ ಪ್ರಕಾರ ಸೂಕ್ತ ಕಾರಣವನ್ನೂ ನೀಡದೆ, ಏಕಾಏಕಿ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶ ನಿಯಮಬಾಹಿರವಾಗಿದೆ. ಹೀಗಾಗಿ ತಮ್ಮನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಬಿ. ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಸಿಎಟಿ 30 ದಿನಕ್ಕೆ ಅಧಿಕಾರಿ ಬಿ. ಶರತ್ ಅವರನ್ನು ವರ್ಗಾಯಿಸಿದ್ದೇಕೆ ಎಂದು ಪ್ರಶ್ನಿಸಿರುವುದಲ್ಲದೇ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ. ಪ್ರಕರಣ ಸಿಎಟಿ ಮೆಟ್ಟಿಲೇರುವುದರಿಂದ ನೂತನ ಜಿಲ್ಲಾಧಿಕಾರಿಗೆ ಸಂಕಷ್ಟ ಎದುರಾಗಿದೆ. ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಬಿ. ಶರತ್ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿದೆ ಎಂದು ಆಕ್ಷೇಪಿಸಿದ್ದ ಸ್ಥಳೀಯ ಸಂಘಟನೆಗಳು ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.