ಮೈಸೂರು: ಲಾಕ್‌ಡೌನ್ ನಿಂದ ಬಸ್ ಸಂಚಾರ ಇಲ್ಲದ ಕಾರಣ ಸ್ನೇಹಿತರ ಬೈಕ್ ಕೇಳಿದರೂ ಕೊಡಲಿಲ್ಲ. ಕೊನೆಗೆ ದಾರಿ ಕಾಣದೇ ತನ್ನ ಹಳೆಯ ಸೈಕಲ್ ಏರಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಗನಿಗೆ ಔಷಧ ತೆಗೆದುಕೊಂಡು ಪುನಃ ಗ್ರಾಮಕ್ಕೆ ಸೈಕಲ್‌ನಲ್ಲಿಯೇ ವಾಪಸ್ ಆಗಿದ್ದಾರೆ. ಸೈಕಲ್‌ನಲ್ಲಿಯೇ 300 ಕಿ.ಮೀ ಕ್ರಮಿಸಿ ಔಷಧ ತರುವಲ್ಲಿ ಯಶಸ್ವಿಯಾದ ತಂದೆಯ ಕತೆಯಿದು.
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಗಾಣಿಗನ ಕೊಪ್ಪಲು ಗ್ರಾಮದ ನಿವಾಸಿ ಆನಂದ್ (45) ಇವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ. ಇವರಿಗೆ ಭೈರೇಶ್ ಎಂಬ ವಿಶೇಷ ಚೇತನ ಮಗನಿದ್ದಾನೆ. ಇವನು ಹುಟ್ಟಿದ 6 ತಿಂಗಳಿನಲ್ಲೇ ಮಗು ಮಾನಸಿಕ ವಿಶೇಷ ಚೇತನ ಎಂಬುವುದು ಕುಟುಂಬದವರಿಗೆ ತಿಳಿದಿದೆ. ಕಳೆದ 10 ವರ್ಷಗಳಿಂದ ಭೈರೇಶ್ಗೆ ಬೆಂಗಳೂರಿನ ನಿಮಾನ್ಸ್ನಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಔಷಧದಿಂದಲೇ ಮಗನ ಆರೋಗ್ಯ ಹತೋಟಿಯಲ್ಲಿರುತ್ತದೆ.
ಔಷಧಿ ಇಲ್ಲವಾದಲ್ಲಿ ಮಗನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಇದನ್ನರಿತಿದ್ದ ತಂದೆ ಆನಂದ್ ಪ್ರತಿ ಬಾರಿ ತಪ್ಪದೆ ಔಷಧಿಯನ್ನು ಬೆಂಗಳೂರಿನಿಂದ 2 ತಿಂಗಳಿಗಾಗುವಷ್ಟು ತರುತ್ತಿದ್ದರು. ಕ್ರಮೇಣ ಕೋವಿಡ್ ಹೆಚ್ಚಳದ ಪರಿಣಾಮ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇತ್ತ ಮಗುವಿಗೆ ನೀಡುತ್ತಿದ್ದ ಔಷಧ ಮುಗಿಯುತ್ತಾ ಬಂದಿದೆ. ಹಾಗಾಗಿ ತಂದೆ ತನ್ನ ಸಂಬಂಧಿಕರು, ಸ್ನೇಹಿತರ ಮತ್ತು ಪರಿಚಯಸ್ಥರ ಸಹಾಯ ಕೇಳಿದ್ದಾರೆ.
ಆದರೆ, ಕೋವಿಡ್ ಪರಿಣಾಮ ಯಾರು ಸಹ ನೆರವಿಗೆ ಬಾರದ ಕಾರಣ ಆನಂದ್ ತನ್ನ ಮಗನಿಗೆ ಔಷಧ ತರಲು ತಮ್ಮ ಹಳೆಯ ಸೈಕಲ್‌ನಲ್ಲಿಯೇ ತೆರಳಿ ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗದ ಮೂಲಕ ಹೊರಟಿದ್ದಾರೆ. ಮಾರ್ಗದ ಮಧ್ಯೆ ಲಾಕ್‌ಡೌನ್ ಇರುವ ಪರಿಣಾಮ ಪೊಲೀಸರ ಲಾಠಿ ಏಟು ಸಹ ಬಿದ್ದರೂ ಇದ್ಯಾವುದಕ್ಕೂ ಜಗ್ಗದೇ ತನ್ನ ಮಗನಿಗಾಗಿ ಹಗಲು ರಾತ್ರಿಯನ್ನದೆ ಸೈಕಲ್ ನಲ್ಲಿಯೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯನ್ನು ತಲುಪಿದ್ದಾರೆ.