ಮೈಸೂರು :ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ. ಶಾಸಕ ಜಿ ಟಿ ದೇವೆಗೌಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಡುವಿನ ಪ್ರತಿಷ್ಠಿತ ಹೋರಾಟದ ವೇದಿಕೆಯಾಗಿ ಪರಿಣಮಿಸಿದ್ದು, ಈ ಚುನಾವಣೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಜಿಟಿಡಿ ಮೂಲೆಗುಂಪು ಮಾಡಲು ಹೆಚ್‌ಡಿಕೆ ಕಾರ್ಯತಂತ್ರ ಇಂದು ಮೈಮೂಲ್ 15 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. 29 ಮಂದಿ ಚುನಾವಣ ಕಣದಲ್ಲಿದ್ದಾರೆ. ಇದರಲ್ಲಿ ಮೈಸೂರು ವಿಭಾಗದ 7 ಹಾಗೂ ಹುಣಸೂರು ವಿಭಾಗದ 8 ನಿರ್ದೇಶಕರ ಸ್ಥಾನಕ್ಕೆ ಬನ್ನೂರು ರಸ್ತೆಯಲ್ಲಿರುವ ಮೇಘ ಡೈರಿ ಆವರಣದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಮತದಾನ ನಡೆಯುತ್ತಿದೆ. 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಟ್ಟು 1052 ಮತದಾರರು ಮತ ಚಲಾಸಹಿಸಲಿದ್ದಾರೆ. 15 ಸ್ಥಾನಗಳ ಪೈಕಿ 11 ಸ್ಥಾನ ಸಾಮನ್ಯ ಕ್ಷೇತ್ರಗಳಿಗೆ, 4 ಮಹಿಳೆಯರಿಗೆ ಮೀಸಲಾಗಿದೆ.
ಶಾಸಕ ಜಿಟಿಡಿ/ಹೆಚ್ಡಿಕೆ ನಡುವೆ ಪ್ರತಿಷ್ಠೆ :ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹಕಾರಿ ಕ್ಷೇತ್ರದಲ್ಲಿ ಬೆಳೆದು ಜಿಲ್ಲೆಯಲ್ಲಿ ಪ್ರಶ್ನಾತೀತ ಸಹಕಾರಿ ನಾಯಕರಾಗಿದ್ದಾರೆ. ಇತ್ತೀಚಿಗೆ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇವರನ್ನು ಈ ಬಾರಿ ಮೈಮೂಲ್ ಚುನಾವಣೆಯಲ್ಲಿ ಅವರ ಬೆಂಬಲಿಗರು ಗೆಲ್ಲದಂತೆ ಮಾಡಲು ಆ ಮೂಲಕ ಮೈಸೂರು ಜಿಲ್ಲೆಯಲ್ಲಿ ಜಿ ಟಿ ದೇವೇಗೌಡರನ್ನು ಮೂಲೆಗುಂಪು ಮಾಡಲು ಸ್ವತಃ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್ ಡಿ ಕೋಟೆ ಅಲ್ಲದೆ ಮೈಸೂರು ಭಾಗದಲ್ಲಿ ಸ್ಥಳೀಯ ಶಾಸಕ ಸಾ ರಾ ಮಹೇಶ್ ಜೊತೆ ಸೇರಿ ಪ್ರಚಾರ ನಡೆಸಿದ್ದಾರೆ.
ಓದಿ : 'ರಾಷ್ಟ್ರೀಯ ಅರಿಶಿಣ ಮಂಡಳಿ' ರಚನೆಗೆ ಲೋಕಸಭೆಯಲ್ಲಿ ಬಚ್ಚೇಗೌಡ ಆಗ್ರಹ
ಅಲ್ಲದೆ ಮೈಸೂರಿನಲ್ಲೆ ಪತ್ರಿಕಗೋಷ್ಠಿ ನಡೆಸಿ ಜಿ ಟಿ ದೇವೇಗೌಡ ಪಾಲಿಗೆ ಜೆಡಿಎಸ್ ಬಾಗಿಲು ಬಂದ್, ಅವರನ್ನು ಇನ್ನೂ ಮುಂದೆ ಜೆಡಿಎಸ್‌ಗೆ ಸೇರಿಸಲ್ಲ ಎಂದು ಹೇಳುವ ಮೂಲಕ ಮೈಮೂಲ್ ಚುನಾವಣೆ ರಂಗೇರುವಂತೆ ಮಾಡಿದ್ದರು. ಪಕ್ಷಾತೀತವಾಗಿ ನಡೆಯುವ ಮೈಮೂಲ್ ಚುನಾವಣೆ ಈಗ ಜಿ ಟಿ ದೇವೇಗೌಡ/ಹೆಚ್ ಡಿ ಕುಮಾರಸ್ವಾಮಿ ನಡುವಿನ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ.
ಜೆಡಿಎಸ್ ಜಿಟಿ ಬಣ/ಜೆಡಿಎಸ್ ಸಾ ರಾ ಬಣ ನಡುವಿನ ಹೋರಾಟ ಈಗ ಜಿಲ್ಲೆಯ ರಾಜಕಾರಣದಲ್ಲಿ ಯಾರ ಬಣದ ಕೈ ಮೇಲಾಗುತ್ತದೆ ಎಂಬ ಕೂತೂಹಲಕ್ಕೆ ಕಾರಣವಾಗಿದೆ. ಸಂಜೆ 4 ಗಂಟೆಗೆ ಮತದಾನ ಮುಗಿಯಲಿದೆ. 5 ಗಂಟೆಯಿಂದ 8 ಗಂಟೆವರೆಗೆ ಮತ ಎಣಿಕೆ ನಡೆಯಲಿದೆ. ರಾತ್ರಿ 8 ಗಂಟೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ.