ಮೈಸೂರು: ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಕ್ಸಿಜನ್ ತಕ್ಷಣ ಸರಬರಾಜು ಆಗದಿದ್ದರೆ ಎರಡು-ಮೂರು ದಿನಗಳಲ್ಲಿ ಸಮಸ್ಯೆಯಾಗಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆ ಕೊರೊನಾ ಸ್ಥಿತಿಗತಿ ಬಗ್ಗೆ ಡಿಸಿ ರೋಹಿಣಿ ಸಿಂಧೂರಿ ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಮಗೆ ಬೇಕಾದಷ್ಟು ಆಕ್ಸಿಜನ್ ಸರಬರಾಜು ಆಗದಿದ್ದರೆ ಸಮಸ್ಯೆ ಆಗಲಿದೆ. ಹೊಸ ಪ್ಲಾಂಟ್ಗೆ ಅನುಮತಿ ಸಿಕ್ಕಿದೆ. ಅದಕ್ಕೆ ಕನಿಷ್ಠ 25 ದಿನ ಬೇಕು.
ನಮಗೆ ತುರ್ತಾಗಿ ಬದಲಿ ಆಕ್ಸಿಜನ್ ಬೇಕು. ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ವಾರದ ಒಳಗಡೆ 50 ವೆಂಟಿಲೇಟರ್ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ.
ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇದೆ. ವಾರಾಂತ್ಯದಲ್ಲಿ ಮತ್ತಷ್ಟು ವೆಂಟಿಲೇಟರ್ ಬೆಡ್ಗಳು ಸಿಗಲಿವೆ.
ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಬೆಡ್ಗಳನ್ನು ನೀಡುತ್ತಿವೆ. ಇದರ ಬಗ್ಗೆ ಪರಿಶೀಲನೆ ನಡೆಸಲು ಒಂದು ತಂಡವನ್ನು ರಚಿಚಲಾಗಿದ್ದು, ಪ್ರತಿದಿನ ಆ ತಂಡ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.
ಪ್ರತಿದಿನ ಮೈಸೂರಿನಲ್ಲಿ 700ರಿಂದ 1000ವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಬರುತ್ತಿವೆ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.