ಮೈಸೂರು:ಕೊರೊನಾ ಹೆಚ್ಚಳದ ನಡುವೆಯೂ ದಸರಾ ಆಚರಣೆಯಾಗುತ್ತಿದೆ. 'ಐ ನೋ ಆಲ್' ಏನ್ ಮಾಡೋದು. ಸರ್ಕಾರ ನಾಡ ಹಬ್ಬವನ್ನ ಬಿಡಬಾರದು ಅಂತ ಆಚರಿಸಲು ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ.
ಮೈಸೂರಿನ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ನಾಡ ಹಬ್ಬವನ್ನ ಬಿಡಬಾರದು ಅಂತ ಆಚರಿಸಲು ಮುಂದಾಗಿದೆ. ಸರ್ಕಾರಕ್ಕೆ ಮೈಸೂರಿನ ವಾಸ್ತವ ಸ್ಥಿತಿಯನ್ನ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.
ಕೊರೊನಾ ಪರೀಕ್ಷೆ ಹೆಚ್ಚಳ ಮಾಡುವುದಕ್ಕೆ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಹಾಗಾಗಿ ಖಾಸಗಿ ಪ್ರಯೋಗ ಶಾಲಾ ತಂತ್ರಜ್ಞರು ಹಾಗೂ ದತ್ತಾಂಶ ನಮೂದಕರನ್ನು ನೇಮಿಸಿಕೊಳ್ಳುವ ಅಗತ್ಯವಿದೆ. ಸರ್ಕಾರವು ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯವಿಲ್ಲದಿದ್ದಲ್ಲಿ ನರ್ಸಿಂಗ್ ಅಂಡ್ ಪ್ಯಾರಾ ಮೆಡಿಕಲ್ ಪರ್ಸನಲ್, ಡಿಪ್ಲೊಮಾ ಓಲ್ಡರ್ಸ್, ವಿಜ್ಞಾನ ಪದವೀಧರರನ್ನು ಸದರಿ ಕಾರ್ಯಕ್ಕೆ ನಿಯೋಜಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಬಿ.ಶರತ್ ಸುದ್ದಿಗೋಷ್ಟಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್ಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ಸೂಚಿಸಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ನ ಸೋಂಕು ನಿಯಂತ್ರಣ ಮೀರಿದಂತಿಲ್ಲ. ಮುಂದಿನ ಎರಡು ತಿಂಗಳೊಳಗೆ ಮೈಸೂರು ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಕೊರೊನಾ ಟೆಸ್ಟ್ ವೇಳೆ ಸಾರ್ವಜನಿಕರು ವೈದ್ಯಕೀಯ ಸಿಬ್ಬಂದಿ ಜೊತೆ ಸಹಕರಿಸಬೇಕು. ಒಂದು ವೇಳೆ ವೈದ್ಯಕೀಯ ಸಿಬ್ಬಂದಿ ಜೊತೆ ಅನುಚಿತವಾಗಿ ನಡೆದುಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ತಪ್ಪಿತಸ್ಥರ ವಿರುದ್ದ ಎಫ್ಐಆರ್ ದಾಖಲಿಸಿ ರೌಡಿ ಶೀಟರ್ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರನ್ನು ಮತ್ತೊಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುವುದು. ಎಲ್ಲರ ಸಹಕಾರದೊಂದಿಗೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುತುವರ್ಜಿಯಿಂದ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಕೊರೊನಾ ಪರೀಕ್ಷೆ ನಡೆಸುವವರಿಗೆ ಅಡ್ಡಿಪಡಿಸಬಾರದು. ಕೊರೊನಾ ಪರೀಕ್ಷೆ ಬಗ್ಗೆ ಕೆಲವರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಕೊರೊನಾ ಟೆಸ್ಟ್ ಮಾಡುವವರಿಗೆ ಸಹಕಾರ ನೀಡಬೇಕು. ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಮುಂದೆ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಕೂಡ ಸ್ವಯಂಪ್ರೇರಿತರಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಡಿ.ಭಾರತಿ ಮಾತನಾಡಿ, ಕೋವಿಡ್ ಪರೀಕ್ಷೆ ಕೇಂದ್ರಗಳು ಇದುವರೆಗೂ ತಾಲೂಕು ಕೇಂದ್ರಗಳಿಗೆ ಸೀಮಿತವಾಗಿದ್ದವು. ಇದೀಗ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲೂ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವ ಸಲುವಾಗಿ ಹೋಬಳಿ ಮಟ್ಟದಲ್ಲೂ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ತೆಗೆಯಲಾಗುವುದು ಎಂದು ತಿಳಿಸಿದರು.