ಮೈಸೂರು: ನಾಡಹಬ್ಬ ದಸರಾ ಕಾರ್ಯಕ್ರಮದ ಸಂಭಾವನೆಯಲ್ಲಿ ಕಮಿಷನ್ ಬೇಡಿಕೆ ಇಡಲಾಗಿದೆ ಎಂಬ ವಿಚಾರವನ್ನು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅಲ್ಲಗಳೆದಿದ್ದಾರೆ. ''ತಮ್ಮನ್ನು ಯಾರೂ ಕಮಿಷನ್ ಕೇಳಿಲ್ಲ, ಯಾರೂ ಸಂಪರ್ಕ ಸಹ ಮಾಡಿಲ್ಲ'' ಎಂದು ಸ್ವತಃ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪಸಮಿತಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತಮಗೆ ನೀಡುವ ಸಂಭಾವನೆಯಲ್ಲಿ ಕಮಿಷನ್ ನೀಡುವಂತೆ ರಾಜೀವ್ ತಾರಾನಾಥ್ ಬಳಿ ಬೇಡಿಕೆ ಇಟ್ಟಿದ್ದರು ಎಂಬ ಮಾಧ್ಯಮಗಳ ವರದಿ ಹಿನ್ನೆಲೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಈ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದರು. ಅವರ ಈ ಸೂಚನೆ ಮೇರೆಗೆ, ದಸರಾ ಸಾಂಸ್ಕೃತಿಕ ಉಪಸಮಿತಿಯ ವಿಶೇಷಾಧಿಕಾರಿ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ತಂಡ ಸ್ವತಃ ತಾರಾನಾಥರ ಮನೆಗೆ ಭೇಟಿ ನೀಡಿತ್ತು.
''ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ತಮ್ಮ ಬಳಿ ಯಾವುದೇ ಅಧಿಕಾರಿಗಳು ಕಮಿಷನ್ ಬೇಡಿಕೆ ಇಟ್ಟಿಲ್ಲ. ಅಲ್ಲದೇ ನಾನು ಯಾವುದೇ ಮಾಧ್ಯಮಕ್ಕೆ ಹೇಳಿಕೆಯೂ ನೀಡಿಲ್ಲ ಎಂದು ಸ್ವತಃ ಪಂಡಿತ್ ರಾಜೀವ್ ತಾರಾನಾಥರೇ ನಮ್ಮ ಬಳಿ ಹೇಳಿದ್ದಾರೆ'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
''ಅವರಮನೆ ವೇದಿಕೆಯಲ್ಲಿ ಸರೋದ್ ವಾದಕ ಕಾರ್ಯಕ್ರಮ ಪ್ರಸ್ತುತಪಡಿಸಲು ತಾರಾನಾಥ್ ಅವರನ್ನು ಸಮಿತಿಯು ಈ ಹಿಂದೆ ಸಂಪರ್ಕಿಸಿ ವಿನಂತಿಸಿತ್ತು. ಬಳಿಕ ಅವರ ಹೆಸರನ್ನು ಸೇರಿಸಿ ಕಲಾವಿದರ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ನಂತರ ಅವರ ಆರೋಗ್ಯದ ವಿಚಾರ ತಿಳಿದು ಅವರ ಸರೋದ್ ಕಾರ್ಯಕ್ರಮ ಕೈಬಿಡಲಾಗಿತ್ತು. ಆದರೆ, 21ರಂದು ಅರಮನೆ ಪ್ರಧಾನ ವೇದಿಕೆಯಲ್ಲಿ ಒಂದು ಗಂಟೆ ಅವಧಿ ಕಾರ್ಯಕ್ರಮ ಪ್ರಸ್ತುತಪಡಿಸಲು ಅವರು ಒಪ್ಪಿಗೆ ನೀಡಿರುವುದಾಗಿಯೂ'' ಪ್ರಕಟಣೆಯಲ್ಲಿ ತಿಳಿಸಲಾಗಿದೆ.