ಮೈಸೂರು : ಜಂಬೂಸವಾರಿಯಲ್ಲಿ ಭಾಗವಹಿಸಲು ಅಭಿಮನ್ಯು ನೇತೃತ್ವದ 9 ಗಜಪಡೆ ಮಂಗಳವಾರ ಅರಮನೆಯನ್ನು ಗಜಪಡೆ ಪ್ರವೇಶ ಮಾಡಲಿದ್ದು, ಅವುಗಳ ಸ್ವಾಗತಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಗಳವಾರ ಮಧ್ಯಾಹ್ನ 12:01 ರಿಂದ 12:51 ರ ಶುಭ ಅಭಿಜಿತ್ ಲಗ್ನದಲ್ಲಿ ಅರಮನೆಯ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಮಾಡುವ ಮೂಲಕ ಅರಮನೆಗೆ ಗಜಪಡೆ ಪ್ರವೇಶ ಮಾಡಲಿವೆ.
ಅರಣ್ಯ ಭವನದಲ್ಲಿ ಗಜಪಯಣದ ಮೂಲಕ ಆಗಮಿಸಿ ವಾಸ್ತವ್ಯ ಹೂಡಿರುವ, ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಅದರ ಜೊತೆ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ವಿಜಯ, ವರಲಕ್ಷ್ಮಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನಂತರ ಕಾಲ್ನಡಿಗೆಯಲ್ಲಿ ಅರಣ್ಯ ಭವನದಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆ ಆಗಮಿಸಲಿದ್ದು. ಅಲ್ಲಿ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹಾದೇವಪ್ಪ ನೇತೃತ್ವದಲ್ಲಿ, ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆ ಪ್ರವೇಶ ಮಾಡಲಿವೆ.
45 ದಿನ ಅರಮನೆಯಲ್ಲಿ ಗಜಪಡೆ ವಾಸ್ತವ್ಯ : ಮಂಗಳವಾರ ಅರಮನೆಗೆ ಆಗಮಿಸಲಿರುವ ಗಜಪಡೆ ಅರಮನೆಯ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ತಾತ್ಕಾಲಿಕ ಷೆಡ್ಗಳಲ್ಲಿ ಮಾವುತರು ಹಾಗು ಗಜಪಡೆ ವಿಶ್ರಾಂತಿ ಪಡೆಯಲಿದ್ದು, ಬುಧವಾರ ಬೆಳಗ್ಗೆ ಎಲ್ಲ ಆನೆಗಳನ್ನು ಆರೋಗ್ಯ ತಪಾಸಣೆ ಮಾಡಿ, ನಂತರ ದೇವಾಲಯದಿಂದ ಧನ್ವಂತರಿ ರಸ್ತೆಯಲ್ಲಿರುವ ವೇ ಬ್ರಿಡ್ಜ್ ನಲ್ಲಿ ಎಲ್ಲ ಆನೆಗಳ ತೂಕ ಹಾಕಲಾಗುವುದು.