ಮೈಸೂರು : ಈ ಬಾರಿ ನಾಡಹಬ್ಬ ಸಾಂಪ್ರದಾಯಿಕ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಆರಮನೆಗೆ ಆಗಮಿಸಿರುವ ಅತ್ಯಂತ ಕಿರಿಯ ವಯಸ್ಸಿನ ಆನೆ ಎಂಬ ಖ್ಯಾತಿಗೆ 21 ವರ್ಷದ ರೋಹಿತ್ ಪಾತ್ರವಾಗಿದ್ದಾನೆ.
ಈ ಆನೆ ಕಂಡರೆ ರಾಜವಂಶಸ್ಥರಿಗೆ ಅಪಾರ ಪ್ರೀತಿ, ಕಾಳಜಿ ಏಕೆ ಎಂಬ ವಿಶೇಷ ವರದಿ ಇಲ್ಲಿದೆ. ಮೈಸೂರು ಅರಸರಾದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ದಿವಂಗತ ವಿಶಾಲಾಕ್ಷಿ ದೇವಿ ಒಡೆಯರ್ ಅವರ ಪುತ್ರಿ ಶೃತಿ ಕೀರ್ತಿ ದೇವಿಗೆ ರೋಹಿತ್ ಆನೆ ಕಂಡರೆ ಬಹಳ ಇಷ್ಟ. ಏಕೆಂದರೆ, 2002 ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಯಡಿಯಾಲ ಅರಣ್ಯ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟ ಆರು ತಿಂಗಳ ಈ ಮರಿ ಆನೆಯನ್ನು ವಿಶಾಲಾಕ್ಷ ದೇವಿ ಒಡೆಯರ್ ಅರಣ್ಯ ಇಲಾಖೆಯಿಂದ ದತ್ತು ಪಡೆದು ತಮ್ಮ ರೆಸಾರ್ಟ್ನಲ್ಲಿ ಪ್ರೀತಿಯಿಂದ 10 ವರ್ಷಗಳ ಕಾಲ ಸಾಕಿದ್ದರು. ಆಗ ಇವರ ಮಗಳು ಶ್ರುತಿ ಕೀರ್ತಿ ದೇವಿ ಕೂಡ ರೋಹಿತ್ ಆನೆಯನ್ನು ಪ್ರೀತಿಯಿಂದ ಸಾಕಿ ಅದರ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದರು.
ಇದನ್ನೂ ಓದಿ :ಮೈಸೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಜಪಡೆಗೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ
ಕೊನೆಗೆ 12 ವರ್ಷ ಇದ್ದಾಗ ರೋಹಿತ್ ಆನೆಯನ್ನು ಬಂಡೀಪುರ ಅರಣ್ಯ ಇಲಾಖೆಗೆ ನೀಡಿದ್ದರು. ಆದರೂ ರೋಹಿತ್ ಆನೆಯ ಬಗ್ಗೆ ಶೃತಿ ಕೀರ್ತಿ ದೇವಿಗೆ ಪ್ರೀತಿ ಕಡಿಮೆಯಾಗಿಲ್ಲ. ಆನೆ ಶಿಬಿರಕ್ಕೆ ಹೋದಾಗ ಸಂದರ್ಭದಲ್ಲಿ ಕರೆದರೆ ಸಾಕು, ಓಡೋಡಿ ಬರುವ ರೋಹಿತ್ ಆನೆ ಬಗ್ಗೆ ರಾಜವಂಶಸ್ಥರಿಗೆ ವಿಶೇಷ ಪ್ರೀತಿ. ಎರಡನೇ ಹಂತದ ಗಜಪಡೆಯ ಜೊತೆಗೆ ದಸರಾದಲ್ಲಿ ಭಾಗವಹಿಸಲು ಆಗಮಿಸಿದ ರೋಹಿತ್ ಆನೆಯ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸಿದ್ದ ಶೃತಿ ಕೀರ್ತಿ ದೇವಿ ಅಂದು ರೋಹಿತ್ ಆನೆಯ ಫೋಟೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಂತಸ ವ್ಯಕ್ತಪಡಿಸಿದ್ದರು.