ಕರ್ನಾಟಕ

karnataka

ETV Bharat / state

Mysore Dasara-2023.. ಪೂರ್ವಭಾವಿ ಸಭೆ: ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ- ಸಚಿವ ಮಹದೇವಪ್ಪ - ಸಚಿವ ಡಾ ಎಚ್ ಸಿ ಮಹದೇವಪ್ಪ

ಇಂದು ಮೈಸೂರು ದಸರಾ ಪೂರ್ವಭಾವಿ ಸಭೆ ನಡೆಯಿತು. ಸೆಪ್ಟೆಂಬರ್ 1ರಂದು ಗಜಪಯಣದ ದಿನಾಂಕ ನಿಗದಿಯಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿ ಡಾ‌.ಮಾಲತಿ ಪ್ರಿಯಾ ತಿಳಿಸಿದರು.

Mysore dasara celebration pre meeting
ಮೈಸೂರು ದಸರಾ ಪೂರ್ವಭಾವಿ ಸಭೆ

By

Published : Aug 14, 2023, 5:43 PM IST

ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡುತ್ತಿರುವುದು

ಮೈಸೂರು: ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಜರುಗಿತು. ಈ ಸಭೆಯಲ್ಲಿ ಹಿರಿಯ ಅರಣ್ಯಾಧಿಕಾರಿ ಡಾ‌. ಮಾಲತಿ ಪ್ರಿಯಾ ಅವರು ಸೆಪ್ಟೆಂಬರ್ 1ರಂದು ಗಜಪಯಣದ ದಿನಾಂಕ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಕಾಲ್ನಡಿಗೆಯ ಮೂಲಕ ಆನೆಗಳನ್ನು ಕರೆತರುವ ಪ್ರಯತ್ನದ ಬಗ್ಗೆ ಚರ್ಚೆ ನಡೆಯಿತು.

"ಗಜಪಯಣ ಕಾರ್ಯಕ್ರಮ ಮುಗಿದ ನಂತರ ಗಜಪಡೆಯನ್ನು ಲಾರಿ ಮೂಲಕ ಕರೆತರುವುದು ಸಂಪ್ರದಾಯವಲ್ಲ. ಆನೆಗಳನ್ನು ಕಾಲ್ನಡಿಗೆಯಲ್ಲೇ ಕರೆತಂದರೆ ಒಳ್ಳೆಯದು. ಹಿಂದೆ ಮಹಾರಾಜರ ಕಾಲದಲ್ಲಿ ಆನೆಗಳಿಗೆ ಫಲತಾಂಬೂಲ ನೀಡಿ ಕಾಲ್ನಡಿಗೆಯಲ್ಲೇ ಕರೆತರುತ್ತಿದ್ದರು. ಆದ್ದರಿಂದ ಈ ಬಾರಿ ಗಜಪಯಣ ಕಾರ್ಯಕ್ರಮ ಮುಗಿದ ನಂತರ ಆನೆಗಳನ್ನು ಕಾಲ್ನಡಿಗೆಯಲ್ಲೇ ಅರಮನೆಗೆ ಕರೆತನ್ನಿ" ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್​ ಸಲಹೆ ನೀಡಿದರು.

ಈ ಸಲಹೆಗೆ ಹಿರಿಯ ಅರಣ್ಯಾಧಿಕಾರಿ ಡಾ. ಮಾಲತಿ ಪ್ರಿಯಾ, "ಆ ರೀತಿ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆತರಲು ಸಾಧ್ಯವಿಲ್ಲ. ಗೈಡ್​ಲೈನ್ಸ್ ಪ್ರಕಾರ ಆನೆಗಳನ್ನು ಕಾಲ್ನಡಿಗೆಯಲ್ಲಿ ಕರೆತರಲು ಅವಕಾಶ ಇಲ್ಲ" ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೂಡ ಸಹಮತ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ದಸರಾ ಉನ್ನತ ಮಟ್ಟದ ಸಭೆಯು ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಜಿ ಟಿ ದೇವೇಗೌಡ, ಶ್ರೀವತ್ಸ, ಹರೀಶ್ ಗೌಡ, ದರ್ಶನ್ ದ್ರುವನಾರಾಯಣ್ ಸೇರಿದಂತೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಬಳಿಕ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಸಭೆಯಲ್ಲಿ ನಡೆದ ವಿಚಾರಗಳನ್ನು ತಿಳಿಸಿದರು. "ಈ ಬಾರಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಹಲವರು ಸಲಹೆ ಕೊಟ್ಟಿದ್ದಾರೆ. ಅದರಂತೆ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.

"ಅಲ್ಲದೇ, ಎಲ್ಲಾ ದಸರಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಲು 16 ಉಪಸಮಿತಿಗಳನ್ನು ರಚಿಸಲಾಗುವುದು. ಅಗತ್ಯ ಬಿದ್ದರೆ ಮತ್ತೆ ಮೂರು ಉಪಸಮಿತಿಗಳನ್ನು ರಚಿಸಲಾಗುವುದು. ಈ ಬಾರಿ ದಸರಾಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡಲಾಗುವುದು. ಕಳೆದ ಬಾರಿಗಿಂತ ಈ ಬಾರಿ ಅದ್ಧೂರಿ ದಸರಾ ನಡೆಸಲಾಗುವುದು. ಸೆಪ್ಟೆಂಬರ್ 1ಕ್ಕೆ ಗಜಪಯಣ ಹಾಗೂ ಸೆಪ್ಟೆಂಬರ್ 4ಕ್ಕೆ ಗಜಪಡೆ ಅರಮನೆಯನ್ನು ಪ್ರವೇಶ ಮಾಡಲಿದೆ" ಎಂದು ಅವರು ಮಾಹಿತಿ ನೀಡಿದ್ರು.

ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ: ಇದೇ ವೇಳೆ ಇನ್ನು ಏಳು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಬಿಜೆಪಿಗರು ಹಗಲು ಕನಸನ್ನು ಕಾಣುತ್ತಿದ್ದಾರೆ. ಆನೆ ನಡೆದುಕೊಂಡು ಹೋಗುವಾಗ ಅದು ಬೀಳುತ್ತದೆ ಎಂದು ನರಿ ಕಾಯ್ದುಕೊಂಡು ಇರುತ್ತದೆ. ಆ ರೀತಿ ಬಿಜೆಪಿ ಪಾಡಾಗಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದ್ದು, ಅದನ್ನು ಕೆಡಿಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಪರೇಷನ್ ಕಮಲ ಕರ್ನಾಟಕದಲ್ಲಿ ನಡೆಯುವುದಿಲ್ಲ. ಆಪರೇಷನ್ ನಡೆಸಿದ್ದಕ್ಕೆ ಬಿಜೆಪಿಯವರಿಗೆ ಇಲ್ಲಿ ಈ ಸ್ಥಿತಿ ಬಂದಿದೆ. ಬಿಜೆಪಿಯವರ ಯಾವ ಆಟವೂ ಇಲ್ಲಿ ನಡೆಯುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ತಿರುಗೇಟು ನೀಡಿದರು.

"ಬಿಜೆಪಿ ಮತ್ತು ಜೆಡಿಎಸ್​ನಿಂದ ಶಾಸಕರು ನಮ್ಮ ಕಡೆ ಬರಲು ತಯಾರಿದ್ದಾರೆ. ನಾವೇ ಕರೆಯುತ್ತಿಲ್ಲ. ಆದರೆ ಅವರಾಗಿಯೇ ಬರುತ್ತಿದ್ದಾರೆ. ಈ ಸ್ಥಿತಿಯಲ್ಲಿ ಸರ್ಕಾರ ಹೇಗೆ ಅಸ್ಥಿರವಾಗುತ್ತದೆ. ನೂರು ಸುಳ್ಳನ್ನು ಹೇಳಿ ಒಂದು ಸತ್ಯ ಮಾಡಲು ಹೊರಟಿದ್ದಾರೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೇಗಾದರೂ ಸರಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ" ಎಂದು ಸಚಿವ ವೆಂಕಟೇಶ್ ಬಿಜೆಪಿಗರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:ಮೈಸೂರು ದಸರಾ 2023 : ಗಜಪಯಣಕ್ಕೆ ಮೊದಲ ಹಂತದ 9 ಆನೆಗಳನ್ನು ಆಯ್ಕೆ ಮಾಡಿದ ಅರಣ್ಯ ಇಲಾಖೆ

ABOUT THE AUTHOR

...view details