ಮೈಸೂರು :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುವ ದಸರಾಗೆ ಭರದ ಸಿದ್ಧತೆ ನಡೆಯುತ್ತಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಅಭಿಮನ್ಯು ನೇತೃತ್ವದ 14 ಆನೆಗಳಿಗೆ ತಾಲೀಮು ನಡೆಯುತ್ತಿದೆ. ಜೊತೆಗೆ ಈ ಆನೆಗಳಿಗೆ ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದೆ. ಒಟ್ಟು 14 ಆನೆಗಳಿಗೆ ನಿತ್ಯ ಎರಡು ಬಾರಿ ಆಹಾರ ನೀಡಲಾಗುತ್ತಿದ್ದು, ಈ ಆಹಾರವನ್ನು ತಯಾರಿಸಲು ಬರೋಬ್ಬರಿ 20 ಗಂಟೆಗಳು ಹಿಡಿಯುತ್ತವೆ.
ಈ ಆನೆಗಳಿಗೆ ದಿನನಿತ್ಯ ಮುಂಜಾನೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ತಾಲೀಮು ನಡೆಸಲಾಗುತ್ತಿದೆ. ಈ ಸಂಬಂಧ ಆನೆಗಳಿಗೆ ಎರಡು ಹೊತ್ತು ಆಹಾರವನ್ನು ನೀಡಲಾಗುತ್ತಿದೆ. ಆನೆಗಳ ಆಹಾರ ವಿಷಯದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಆನೆಗಳಿಗೆ ಮೇವಿನ ಜೊತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಆನೆಗಳಿಗೆ ಆಹಾರ ತಯಾರಿ : ಬೆಳಗ್ಗೆ ತಾಲೀಮು ಶುರುವಾಗುವ ಮುನ್ನ ಹಾಗೂ ಸಂಜೆ ತಾಲೀಮು ಮುಗಿದ ಆನೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಆನೆಗಳ ಆಹಾರ ತಯಾರಿಗೆ ಸುಮಾರು 20 ಗಂಟೆ ಸಮಯ ತಗಲುವುದು. ಆಹಾರ ತಯಾರಾದ ನಂತರ ಅದನ್ನು ತಣ್ಣಗಾಗಿಸಿ, ತರಕಾರಿ ಹಾಗೂ ಔಷಧ ಮಿಶ್ರಣ ಮಾಡಿ ಆಹಾರವನ್ನು ಮುದ್ದೆ ರೀತಿ ಮಾಡಿ ಆನೆಗೆ ನೀಡಲಾಗುತ್ತದೆ. 20 ಗಂಟೆಗಳ ಕಾಲ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಇದರ ಜೊತೆಗೆ ಕಾವಾಡಿಗರು ಆನೆಗಳಿಗೆ ಹಸಿರು ಹುಲ್ಲು, ಕಬ್ಬು, ಭತ್ತದ ಹುಲ್ಲಿನೊಂದಿಗೆ, ಬೆಲ್ಲ ಮುಂತಾದವುಗಳನ್ನು ನೀಡುತ್ತಾರೆ.