ಮೈಸೂರು: ನಾಡಹಬ್ಬ ದಸರಾದ ಅಂಗವಾಗಿ ರೈತ ದಸರಾ ಸಮಿತಿ ವತಿಯಿಂದ ಶನಿವಾರ ಜೆ.ಕೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಹಸು 46.690 ಕೆ.ಜಿ ಹಾಲು ನೀಡುವ ಮೂಲಕ 50 ಸಾವಿರ ರೂಪಾಯಿ ಮೊತ್ತದ ಚೆಕ್ ಹಾಗೂ ಟ್ರೋಫಿಯನ್ನು ತನ್ನ ಮಾಲೀಕನಿಗೆ ದೊರಕಿಸಿಕೊಟ್ಟಿದೆ.
ಮಂಡ್ಯ ಜಿಲ್ಲೆಯ ದುದ್ದಗ್ರಾಮದ ಶೀರ ಹೆಗಡೆ ಅವರ ಹಸು 36.450 ಕೆ.ಜಿ ಹಾಲು ನೀಡಿದ್ದರಿಂದ ದ್ವಿತೀಯ ಸ್ಥಾನ ಪಡೆದು, 40 ಸಾವಿರ ರೂ. ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಮೈಸೂರಿನ ಕಾಟಪ್ಪ ಗರಡಿ ಸಮೀಪದ ನಿವಾಸಿ ಪಿ. ಸಾರವ್ ವಿನೋದ್ ರವೀಂದ್ರ ಅವರ ಹಸು 34.160 ಕೆ.ಜಿ ಹಾಲು ನೀಡಿದ್ದರಿಂದ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ಹಾಗೂ ಟ್ರೋಫಿ ಪಡೆದುಕೊಂಡರು. ಬೆಂಗಳೂರಿನ ಆನೇಕಲ್‌ನ ಪಿ.ಶ್ರೀನಿವಾಸ್ ಅವರ ಹಸು 34.070 ಕೆ.ಜಿ. ಹಾಲು ನೀಡಿದ್ದರಿಂದ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು. ಇವರಿಗೆ 10 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು.
ಈ ಸ್ಪರ್ಧೆಯಲ್ಲಿ ಐದು ಜಿಲ್ಲೆಗಳ 10 ಸ್ಪರ್ಧಿಗಳು ಭಾಗವಹಿಸಿ, ನಿನ್ನೆ (ಶನಿವಾರ) ಬೆಳಗ್ಗೆ ಹಸುವಿನ ಹಾಲನ್ನು ಕರೆದರು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಕರೆದ ಹಾಲಿನ ತೂಕವನ್ನು ಪರಿಗಣಿಸಿ ಬಹುಮಾನ ನೀಡಲಾಗಿದೆ. ಸ್ಪರ್ಧೆಯಲ್ಲಿ ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರು ಜಿಲ್ಲೆಯಿಂದ 10 ಜನ ರೈತರು ಇದ್ದರು. ಅದರಲ್ಲಿ ಬೆಳಗ್ಗೆ ಹಾಗೂ ಸಂಜೆ ಸೇರಿದಂತೆ ಹಾಲು ಕರೆದ ಸ್ಪರ್ಧಿಗಳ ವಿವರ ಹೀಗಿದೆ.