ಮೈಸೂರು: ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಬ್ರಾಂಡಿಂಗ್ ಮೈಸೂರು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯ ಪೋಸ್ಟರನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಬಿಡುಗಡೆ ಮಾಡಿದರು. ಈ ಸ್ಪರ್ಧೆ ಯಾವ ರೀತಿ ನಡೆಯುತ್ತದೆ. ಯಾರೆಲ್ಲ ಭಾಗವಹಿಸಬಹುದು ಹಾಗೂ ಬಹುಮಾನಗಳ ವಿವರಗಳ ಬಗ್ಗೆ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು ಎಂದರು.
ಅರಮನೆ ನಗರಿ ಮೈಸೂರು ಪ್ರವಾಸೋದ್ಯಮವನ್ನು ಹೆಚ್ಚು ಅವಲಂಬಿಸಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ದಸರಾ ಸಂದರ್ಭದಲ್ಲಿ ಜಂಬೂ ಸವಾರಿ ನೋಡಲು ಕೋಟ್ಯಾಂತರ ಜನರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಾರೆ. ಆದರೆ ಕೋವಿಡ್ ನಂತರ ಜಿಲ್ಲೆಯ ಪ್ರವಾಸೋದ್ಯಮ ಅಷ್ಟೇನೂ ಚೇತರಿಕೆ ಕಂಡಿಲ್ಲ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಈ ಬಾರಿ ದಸರಾ ಆಚರಣೆ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಹೊಸ ಪ್ರಯತ್ನಕ್ಕೆ ಕೈ ಹಾಕಿವೆ. ಈ ಸಂಬಂಧ ಬ್ರಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜಿಸಲಾಗಿದೆ.
ಬ್ರಾಂಡಿಂಗ್ ಮೈಸೂರು ಅಡಿಯಲ್ಲಿ ನಾಲ್ಕು ಸ್ಪರ್ಧೆ: "ಕೊನೆಯಿಲ್ಲದ ಸಂತಸದ ಗೂಡು ನಮ್ಮ ಮೈಸೂರು" ಎಂಬ ವಿಷಯದ ಕುರಿತು ನಾಲ್ಕು ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ಮೊದಲನೆಯದಾಗಿ 1. ಆಕರ್ಷಕ ಲೋಗೊ ಮತ್ತು ಟ್ಯಾಗ್ ಲೈನ್ ಮಾಡುವ ಸ್ಪರ್ಧೆ, 2. ಒಂದು ಸುಂದರ ಶುಭಕಾರಿ ಸ್ಪರ್ಧೆ, 3. ವಿಭಿನ್ನವಾದ ಸ್ಮರಣಿಕೆ ಸ್ಪರ್ಧೆ, 4. ಮೈಸೂರಿನ ನೆಚ್ಚಿನ ಜಾಗ, ಚಟುವಟಿಕೆಗಳನ್ನು ವಿವರಿಸುವ ಒಂದು ಬ್ಲಾಗ್ ಹೆಸರಿನ ಸ್ಪರ್ಧೆ ನಡೆಯಲಿದೆ. ಹೀಗೆ ನಾಲ್ಕು ಸ್ಪರ್ಧೆಗಳು ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಈ ಪ್ರತಿ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 20 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ದ್ವಿತೀಯ ಬಹುಮಾನ 10 ಸಾವಿರ ರೂ. ತೃತೀಯ ಬಹುಮಾನ 5 ಸಾವಿರ ರೂ. ಅನ್ನು ನಿಗದಿಪಡಿಸಲಾಗಿದೆ. ವಿಜೇತರ ಹೆಸರನ್ನು ಪ್ರವಾಸೋದ್ಯಮದ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಸ್ಪರ್ಧೆಗಳಿಗೆ ಆಕಾಂಕ್ಷಿಗಳು ತಮ್ಮ ಹೆಸರು ನೋಂದಾಯಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ವಿವರವನ್ನು Icompetitions@karnatakatourism.org ವೆಬ್ ಸೈಟ್ಗೆ ಕಳುಹಿಸಬಹುದು.
ಇದನ್ನೂ ಓದಿ :Mysore Dasara: ಜಂಬೂಸವಾರಿಯಂದು ಚಾಮುಂಡೇಶ್ವರಿಗೆ ಸರ್ಕಾರದಿಂದಲೇ ಸೀರೆ ಕೊಡಲಿ- ಪ್ರತಾಪ್ ಸಿಂಹ