ಮೈಸೂರು:ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆದು ಚೋಳಮಂಡಲಂ ಫೈನಾನ್ಸ್ ಕಂಪನಿಗೆ ಒಂದು ಕೋಟಿಗೂ ಅಧಿಕ ಹಣ ಸಾಲ ಪಡೆದು ವಂಚಿಸಿದ್ದ 15 ಮಂದಿ ಖದೀಮರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚೋಳಮಂಡಲಂ ಫೈನಾನ್ಸ್ನಲ್ಲಿ 10 ಲಾರಿಗಳ ಮೇಲೆ ಒಟ್ಟು 1 ಕೋಟಿ 35 ಲಕ್ಷ 53 ಸಾವಿರ ರೂ. ವಾಹನ ಸಾಲ ಪಡೆದಿದ್ದರು. ಕೆಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು. ಬಳಿಕ ಸಾಲದ ಮಾಸಿಕ ಕಂತು ನಿಲ್ಲಿಸಿದ್ದರು. ಈ ವೇಳೆ ಲಾರಿ ವಶಕ್ಕೆ ಪಡೆಯಲು ಹೋದ ಫೈನಾನ್ಸ್ ಕಂಪನಿಯ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಅಲ್ಲದೇ ಲಾರಿಗಳ ಇಂಜಿನ್, ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್ ವಿಜಯ್ ಎಂಬುವವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.