ಮೈಸೂರು/ಊಟಿ:ತಮಿಳುನಾಡಿನ ಊಟಿಯಲ್ಲಿ ಗುರುವಾರ ಕಾರು ಅಪಘಾತಕ್ಕೀಡಾಗಿ ಮೈಸೂರಿನ ಬಿಜೆಪಿ ಮುಖಂಡರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮೃತ ವ್ಯಕ್ತಿ ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಎಂದು ಗುರುತಿಸಲಾಗಿದೆ.
ಬುಧವಾರದಂದು ಸ್ವಾಮಿಗೌಡ ಅವರು ತಮ್ಮ ಸ್ನೇಹಿತ ಜಗದೀಶ ಗೌಡ ಅವರ ಕುಟುಂಬ ಜೊತೆ ತಮಿಳುನಾಡಿನ ಊಟಿ ಪ್ರವಾಸಕ್ಕೆ ತೆರಳಿದ್ದರು. ಕಾರಿನಲ್ಲಿ ಸ್ವಾಮಿಗೌಡ, ಜಗದೀಶ್ ಗೌಡ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಊಟಿ ಪ್ರವಾಸಕ್ಕೆ ಮುಗಿಸಿಕೊಂಡು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೂಡ್ಲೂರು ಬಳಿ ಇವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ವಾಮಿಗೌಡ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಜಗದೀಶ್ ಗೌಡ ಕುಟುಂಬದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಂಡಿದ್ದರು. ಬಳಿಕ ಈ ಸುದ್ದಿಯನ್ನು ಪೊಲೀಸರಿಗೆ ರವಾನಿಸಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಓದಿ:ನರಸಿಂಹರಾಜ ಕ್ಷೇತ್ರದಲ್ಲಿ ತಂದೆ-ಮಕ್ಕಳದ್ದೇ ಪ್ರಾಬಲ್ಯ: ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ತನ್ನ ಕೋಟೆಯನ್ನು ಉಳಿಸಿಕೊಳ್ಳುತ್ತಾ?
ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ:ಗುರುವಾರ ಬೆಳಗ್ಗೆ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಇಲ್ಲಿನ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆ್ಯಂಬುಲೆನ್ಸ್ವೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಆ್ಯಂಬುಲೆನ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು.
ಮೃತರನ್ನು ಆ್ಯಂಬುಲೆನ್ಸ್ನಲ್ಲಿದ್ದ ಕನಕಮಣಿ (72), ಆಕಾಶ್ (17) ಮತ್ತು ಆ್ಯಂಬುಲೆನ್ಸ್ ಚಾಲಕ ಸಾವು ಎಂದು ಗುರುತಿಸಲಾಗಿತ್ತು. ಇವರು ಅಹಮದಾಬಾದ್ನಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ವಾಹನದ ಸಂಖ್ಯೆ ಗಮನಿಸಿದಾಗ ರಾಜಸ್ಥಾನದ ಬಿಕನೇರ್ ಮೂಲಕದ ಆ್ಯಂಬುಲೆನ್ಸ್ ಎಂದು ತಿಳಿದು ಬಂದಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ತಮಿಳುನಾಡಿನ ತಿರುನಲ್ವೇಲಿ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅವರ ಶವವನ್ನು ಅಹಮದಾಬಾದ್ನಿಂದ ತಿರುನಲ್ವೇಲಿಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಿನ ಜಾವ ಚಿತ್ರದುರ್ಗದ ಮಲ್ಲಾಪುರ ಬಳಿ ಹಾದು ಹೋಗುವಾಗ ರಸ್ತೆ ಬಳಿ ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿತ್ತು. ಈ ವೇಳೆ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.