ಮೈಸೂರು:ಮತಾಂತರ ನಿಷೇಧ ಕಾಯ್ದೆ ಅಗತ್ಯ ಇರಲಿಲ್ಲ. ಈ ಕಾಯ್ದೆಯಿಂದ ಮುಗ್ಧ ಜನರಿಗೆ ತೊಂದರೆಯಾಗುತ್ತದೆ. ಜೊತೆಗೆ ಇದೊಂದು ರಾಜಕೀಯ ಆಟ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೈಸೂರು ಪ್ರಾಂತ್ಯದ ಬಿಷಪ್ ಡಾ.ಕೆ.ಎ. ವಿಲಿಯಂ ಹೇಳಿದರು.
ಬಿಷಪ್ ಹೌಸ್ನಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಯಿಂದ ನಮ್ಮ ಕ್ರಿಶ್ಚಿಯನ್ ಸಮುದಾಯದ ಕ್ಯಾಥೋಲಿಕರಿಗೆ ತೊಂದರೆಯಾಗುವುದಿಲ್ಲ. ಜನರು ಸ್ವಯಂ ಪ್ರೇರಿತರಾಗಿ ಬಂದರೆ ಮಾತ್ರ ಕಾನೂನು ನಿಯಮಗಳನ್ನು ಅನುಸರಿಸಿ ಧರ್ಮಕ್ಕೆ ಬನ್ನಿ ಎನ್ನುತ್ತೇವೆ. ಆದರೆ, ಬಲವಂತವಾಗಿ ಯಾವ ಕಾರಣಕ್ಕೂ ನಾವು ಮತಾಂತರ ಮಾಡುವುದಿಲ್ಲ ಎಂದರು.
ಈ ಕಾಯ್ದೆ ಅಗತ್ಯ ಈಗ ಇರಲಿಲ್ಲ. ಈ ಕಾಯ್ದೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬ ಆತಂಕ ನಮಗಿದೆ. ಅವರು ತಮ್ಮ ಸ್ವಾರ್ಥಕ್ಕೋಸ್ಕರ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಾರೆ. ಇದರಿಂದ ಸಾಮಾನ್ಯ, ಮುಗ್ದ ಜನರಿಗೆ ತೊಂದರೆಯಾಗುತ್ತದೆ. ಈ ಕಾಯ್ದೆ ಇರುವುದರಿಂದ ಇದರ ಉಪಯೋಗ ಪಡೆದು ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂಬ ಆತಂಕವನ್ನು ಬಿಷಪ್ ವ್ಯಕ್ತಪಡಿಸಿದರು.