ಮೈಸೂರು :ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲಕರವಾಗಿದ್ದ ಬಂಡಿಪಾಳ್ಯ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಕೆರೆ ಕಸದ ತೊಟ್ಟಿಯಾಗಿದೆ.
ಬಂಡಿಪಾಳ್ಯ ಗ್ರಾಮ ಹಾಗೂ ಹೊಸಹುಂಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಬಂಡಿಪಾಳ್ಯ ಕೆರೆಯ ನೀರು ಸಂಜೀವಿನಿಯಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿದ ಪರಿಣಾಮ ಕೆರೆ ಸಂಪೂರ್ಣ ಬತ್ತಿಹೋಗಿದೆ.
ಸಂಪೂರ್ಣ ಬತ್ತಿದ ಬಂಡಿಪಾಳ್ಯ ಕೆರೆ ಬತ್ತಿ ಹೋಗಿರುವ ಕೆರೆಯನ್ನು ಉಳಿಸಿ ಮತ್ತೆ ಕೆರೆ ಅಭಿವೃದ್ಧಿಗೆ ವ್ಯವಸ್ಥೆ ಮಾಡದೇ, ಅದನ್ನು ಕಸದ ತೊಟ್ಟಿ ಮಾಡಲು ಸಾರ್ವಜನಿಕರು ಹೊರಟಿದ್ದಾರೆ. ಎದುರುಗಡೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದರಿಂದ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿ ಈ ರಸ್ತೆ ಮೂಲಕವೇ ಸಂಚಾರ ಮಾಡುತ್ತಾರೆ. ಆದರೆ, ಯಾರು ಕೂಡ ಕೆರೆ ಉಳಿವಿಗೆ ಮನಸ್ಸು ಮಾಡಿಲ್ಲ.
ಹೀಗೆ ಕೆರೆ ಉಳಿಸದೆ ಹಾಗೆಯೇ ಬಿಟ್ಟರೆ ಮುಂದೊಂದಿನ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಇದರ ಮೇಲೆ ಬೀಳದೆ ಇರದು. ಯಾಕೆಂದರೆ, ಈ ರಸ್ತೆ ವಾಣಿಜ್ಯ ವಹಿವಾಟಿಗೆ ಹೇಳಿ ಮಾಡಿಸಿದಂತಿದೆ. ಹೊಸಹುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಂಡಿಪಾಳ್ಯ ಕೆರೆಯನ್ನು ಅಧಿಕಾರಿಗಳು ಉಳಿಸದೇ ಹೋದರೆ ನಿವೇಶನವಾಗಿ ಹಂಚಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.