ಮೈಸೂರು: ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಆವರಣದಲ್ಲಿರುವ 9 ದೇವಾಲಯಗಳ ದರ್ಶನಕ್ಕೆ ಪ್ರತಿದಿನ ಬೆಳಗ್ಗೆ 6.30 ರಿಂದ 10 ಗಂಟೆ, ಸಂಜೆ 6 ರಿಂದ 8.30 ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಯಾವ ಯಾವ ದ್ವಾರಗಳ ಮೂಲಕ ಭಕ್ತರು ಪ್ರವೇಶಿಸಬೇಕು ಎನ್ನುವುದನ್ನೂ ತಿಳಿಸಲಾಗಿದೆ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಭಕ್ತರ ಗಮನಕ್ಕೆ..: ಭಕ್ತರು ಕಾಲ್ನಡಿಗೆ ಮೂಲಕ ಮಹಾನಗರ ಪಾಲಿಕೆಯ ಮುಂಭಾಗದ ಅರಮನೆಯ ಕರಿಕಲ್ಲು ತೊಟ್ಟಿ ದ್ವಾರದ ಮೂಲಕ ಪ್ರವೇಶ ಪಡೆದು, ಪ್ರಸನ್ನ ಕೃಷ್ಣ ಸ್ವಾಮಿ ದೇವಾಲಯ, ಖಿಲ್ಲೆ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಲಕ್ಷ್ಮೀ ರಮಣ ಸ್ವಾಮಿ ದೇವಾಲಯಗಳ ದರ್ಶನ ಪಡೆಯಬಹುದು. ವರಾಹ ದ್ವಾರದ ಮೂಲಕ ಶ್ವೇತ ವರಾಹ ಸ್ವಾಮಿ ದೇವಾಲಯಕ್ಕೆ ದರ್ಶನ ಪಡೆಯಲು ತೆರಳಬಹುದು. ಭುವನೇಶ್ವರಿ ದೇವಾಲಯಕ್ಕೆ ಜಯರಾಮ, ಬಲರಾಮ ದ್ವಾರದ ಮೂಲಕ ತೆರಳಬಹುದು. ಜಯ ಮಾರ್ತಾಂಡ ದ್ವಾರದ ಮೂಲಕ ಗಾಯತ್ರಿ ದೇವಾಲಯ, ತ್ರಿನೇಶ್ವರ ಸ್ವಾಮಿ ದೇವಾಲಯ, ಕೋಡಿ ಸೋಮೇಶ್ವರ ಸ್ವಾಮಿ ದೇವಾಲಯ ಹಾಗೂ ಕೋಡಿ ಕಾಲ ಭೈರವೇಶ್ವರ ಸ್ವಾಮಿ ದೇವಾಲಯಗಳ ದರ್ಶನ ಪಡೆಯಬಹುದು.
ಅಂಗವಿಕಲರು ಹಾಗೂ ವೃದ್ದರು ಈ ಸಮಯಗಳಲ್ಲಿ ತಮ್ಮ ವಾಹನಗಳ ಮೂಲಕ ನೇರವಾಗಿ ಪ್ರವೇಶ ಪಡೆಯಬಹುದು. ದೇವಸ್ಥಾನಗಳ ಪ್ರವೇಶಕ್ಕೆ ಬರುವವರು ತಮ್ಮ ವಾಹನಗಳನ್ನು ಕರಿಕಲ್ಲು ತೊಟ್ಟಿ ದ್ವಾರ, ವರಾಹ ದ್ವಾರ, ದೊಡ್ಡ ಕೆರೆ ಮೈದಾನ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿಲುಗಡೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.