ಮೈಸೂರು: ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ನಗರದ ಯಾದವಗಿರಿ 8ನೇ ಮುಖ್ಯರಸ್ತೆಯ ದಿನೇಶ್, ಕ್ಲಾಸಿಯಾ ದಂಪತಿ ಪುತ್ರಿ ರಿಯಾ (3) ಮರಳಿ ಮನೆಗೆ ಹಿಂದಿರುಗಿದ್ದು, ಮನೆಯವರಿಗೆ ತಿಳಿಸದೆ ಬಾಲಕಿಯ ಚಿಕ್ಕಪ್ಪ ಹೊರಗೆ ಕರೆದುಕೊಂಡು ಹೋಗಿದ್ದ ಎಂಬ ವಿಚಾರ ತಿಳಿದು ಬಂದಿದೆ.
ನಡೆದಿದ್ದೇನು ?
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ ದಿಯಾಳನ್ನು ಸೋಮವಾರಪೇಟೆಯಿಂದ ಬಂದಿದ್ದ ಚಿಕ್ಕಪ್ಪ ಪ್ರಸನ್ನ ಎಂಬುವರು ಮನೆಯಲ್ಲಿ ಯಾರಿಗೂ ವಿಷಯ ಹೇಳದೆ ಆಕೆಯನ್ನು ಹೆಬ್ಬಾಳಿನಲ್ಲಿರುವ ತನ್ನ ಸ್ನೇಹಿತರ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.
ಇತ್ತ ಮನೆಯಲ್ಲಿ ಮಗು ಕಾಣದೆ ಇದ್ದುದ್ದರಿಂದ ಯಾರೋ ಅಪರಹಣ ಮಾಡಿದ್ದಾರೆಂದು ಆತಂಕಗೊಂಡ ತಾಯಿ ಕ್ಲಾಸಿಯಾ, ಬಾಲಕಿಗಾಗಿ ಹುಡುಕಾಟ ನಡೆಸಿ ನಗರದ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪೊಲೀಸರು ವಿವಿಧೆಡೆ ಸಂಚಾರ ನಡೆಸಿ ಮಗುವಿನ ಹುಡುಕಾಟದಲ್ಲಿ ನಿರತರಾಗಿದ್ದರು. ಬಳಿಕ ಮಗುವಿನ ಚಿಕ್ಕಪ್ಪನ ಸ್ನೇಹಿತರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ಮಗು ಹೆಬ್ಬಾಳಿನಲ್ಲಿರುವುದು ತಿಳಿದು ಬಂದಿತ್ತು. ಹೆಬ್ಬಾಳಿಗೆ ತೆರಳಿ ಮಗುವನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬರಲಾಗಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.
ಇದನ್ನೂ ಓದಿ : ಪರಿಷತ್ ಚುನಾವಣೆ: ಪುರಸಭೆಗಳ ನಾಮನಿರ್ದೇಶಿತ ಸದಸ್ಯರ ಮತದಾನಕ್ಕೆ ಹೈಕೋರ್ಟ್ ಸಮ್ಮತಿ