ಮೈಸೂರು: ಈ ಬಾರಿ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಹೆಣ್ಣು ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಜೊತೆಗೆ ದಸರಾ ಗಜಪಡೆಯ ಆಯ್ಕೆಗೆ ಮೊದಲ ಹಂತದ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಆರಂಭಿಸಿದೆ. ಜುಲೈ ಅಂತ್ಯದ ವೇಳೆಗೆ ದಸರಾದಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಹಾಗೂ ಆಗಸ್ಟ್ ಎರಡನೇ ವಾರ ಗಜಪಯಣ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಬಾರಿ ದಸರಾ ಮಹೋತ್ಸವ ಆರಂಭಕ್ಕೆ 90 ದಿನಗಳು ಉಳಿದಿದ್ದು. ಈಗಾಗಲೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ ಆಯ್ಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ನಿನ್ನೆ ವನ್ಯಜೀವಿ ವಿಭಾಗದ ಸೌರವ್ ಕುಮಾರ್ ಮತ್ತಿಗೋಡು ಅವರು ಭೀಮನಕಟ್ಟೆ ಅರಣ್ಯ ಶಿಬಿರಕ್ಕೆ ಭೇಟಿ ನೀಡಿ, 9 ಆನೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಯನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದೆ. ಇದರ ಜೊತೆಗೆ ಇನ್ನೆರೆಡು ದಿನಗಳಲ್ಲಿ ರಾಂಪುರ ಆನೆ ಶಿಬಿರಕ್ಕೆ ಭೇಟಿ ನೀಡಿ, ಆನೆಗಳನ್ನು ಪರಿಶೀಲನೆ ಮಾಡುವ ಬಗ್ಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ ಅಂತ್ಯದ ವೇಳೆಗೆ 14 ಆನೆಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು. ಆಗಸ್ಟ್ ಎರಡನೇ ವಾರ ಬೆಂಗಳೂರಿನಲ್ಲಿ, ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ, ದಸರಾ ಸಿದ್ಧತೆ ಹಾಗೂ ಗಜಪಯಣದ ಬಗ್ಗೆ ಅಂತಿಮ ರೂಪುರೇಷೆ ಸಿದ್ದವಾಗಲಿದೆ. ಈ ನಡುವೆ ಈ ಬಾರಿಯ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಸ್ವತಃ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ:ಕಳೆದ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಹೆಣ್ಣು ಆನೆ ಲಕ್ಷ್ಮಿ, ದಸರಾ ಮಹೋತ್ಸವದ ಸಂದರ್ಭದಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಈ ಬಾರಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ದಸರಾದಲ್ಲಿ ಭಾಗವಹಿಸುವ ಹೆಣ್ಣು ಆನೆಗಳ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಿ, ಪ್ರೆಗ್ನೆನ್ಸಿ ಟೆಸ್ಟ್ ನಡೆಸಲು ಎಪಿಸಿಸಿಎಫ್ ಸಾಶ್ವತಿ ಮಿಶ್ರಾ ಅವರು ಸೂಚನೆ ನೀಡಿದ್ದಾರೆ. ಹೆಣ್ಣಾನೆಗಳಿಗೆ ಕಡ್ಡಾಯವಾಗಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ತಿಳಿಸಲಾಗಿದೆ. ನಾಲ್ಕು ಆನೆ ಶಿಬಿರದಲ್ಲಿರುವ ಹೆಣ್ಣಾನೆಗಳ ಆರೋಗ್ಯ, ವರ್ತನೆ ಹಾಗೂ ಸ್ವಭಾವದ ಸ್ಥಿತಿಗತಿ ಗಮನಿಸಲು ಅರಣ್ಯ ಇಲಾಖೆಯ ವೈದ್ಯರು ಹಾಗೂ ಶಿಬಿರದಲ್ಲಿ ಆನೆ ನೋಡಿಕೊಳ್ಳುವ ಮಾವುತರಿಗೆ ಸೂಚನೆ ನೀಡಲಾಗಿದೆ.