ಕರ್ನಾಟಕ

karnataka

ETV Bharat / state

ನಾಳೆ ಮೈಮುಲ್ ಚುನಾವಣೆ.. ಹೆಚ್​ಡಿಕೆ-ಜಿಟಿಡಿ ನಡುವೆ ಪ್ರತಿಷ್ಠೆಯ ಕದನ..

ಮೇಯರ್ ಚುನಾವಣೆ ಮುಗಿದ ಬಳಿಕ, ಮೈಮುಲ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹೆಚ್.ಡಿ ಕುಮಾರಸ್ವಾಮಿ, ತಮ್ಮ ವಿರೋಧಿ ಬಣಗಳಿಗೆ, ಟಕ್ಕರ್‌ ಕೊಡಲು ನಾನಾ ತಂತ್ರ ರೂಪಿಸಿದ್ದಾರೆ. ಇತ್ತ ಜಿಟಿಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಅವರ ಬೆಂಬಲ ಕೋರಿದ್ದಾರೆ..

mymul election Tomorrow at mysore
ನಾಳೆ ಮೈಮುಲ್ ಚುನಾವಣೆ

By

Published : Mar 15, 2021, 8:50 PM IST

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಆಡಳಿತ(ಮೈಮುಲ್)ಕ್ಕೆ ನಾಳೆ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರ ನಡುವೆ ಪ್ರತಿಷ್ಠೆ ರಂಗೇರಿದೆ.

ಮೂರು ದಿನಗಳಿಂದ ಮೈಸೂರಿನಲ್ಲಿಯೇ ಠಿಕಾಣಿ ಹೂಡಿರುವ ಹೆಚ್ ಡಿ ಕುಮಾರಸ್ವಾಮಿ, ಹೇಗಾದರೂ ಮಾಡಿ ಜಿಟಿಡಿ ಬಣವನ್ನು ಕಟ್ಟಿಹಾಕಿ ತಮ್ಮ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಈ ರಹಸ್ಯ ತಿಳಿದಿರುವ ಜಿ ಟಿ ದೇವೇಗೌಡ ಅವರು, ಕುಮಾರಸ್ವಾಮಿಯವರಿಗೆ ತಮ್ಮ ಶಕ್ತಿ ತೋರಿಸಲು ಸಜ್ಜಾಗಿದ್ದಾರೆ. ಅಲ್ಲದೆ 'ಮೈಸೂರು ಹೈಕಮಾಂಡ್'(ಸಾ ರಾ ಮಹೇಶ್) ತನ್ನ ಶಕ್ತಿ ಏನೆಂದು ತೋರಿಸಲು ತಂತ್ರಗಾರಿಕೆಗೆ ಮುಂದಾಗಿದ್ದಾರೆ.

ಮೇಯರ್ ಚುನಾವಣೆ ಮುಗಿದ ಬಳಿಕ, ಮೈಮುಲ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹೆಚ್.ಡಿ ಕುಮಾರಸ್ವಾಮಿ, ತಮ್ಮ ವಿರೋಧಿ ಬಣಗಳಿಗೆ, ಟಕ್ಕರ್‌ ಕೊಡಲು ನಾನಾ ತಂತ್ರ ರೂಪಿಸಿದ್ದಾರೆ. ಇತ್ತ ಜಿಟಿಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಅವರ ಬೆಂಬಲ ಕೋರಿದ್ದಾರೆ.

ನಾಳೆ ಮೈಮುಲ್ ಚುನಾವಣೆ

ಮೈಮುಲ್ ‌ಚುನಾವಣೆ: ಮೈಮುಲ್ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ(ಮಾ.16) ಚುನಾವಣೆ ನಡೆಯಲಿದೆ. ಮೈಸೂರು ಉಪ ವಿಭಾಗದ ಏಳು ನಿರ್ದೇಶಕರ ಸ್ಥಾನಗಳಿಗೆ 15 ಮಂದಿ ಕಣದಲ್ಲಿದ್ದಾರೆ. ಇದರಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ.

ಏಳು ಸ್ಥಾನಗಳಲ್ಲಿ ಎರಡು ಮಹಿಳೆಯರಿಗೆ ಮೀಸಲಿದ್ದು, ಇದಕ್ಕೆ ನಾಲ್ಕು ಜನ ಸ್ಪರ್ಧಿಸಿದ್ರೆ, ಮಾಜಿ ಶಾಸಕ, ಜಿಪಂ ಮಾಜಿ ಅಧ್ಯಕ್ಷೆಯಾಗಿದ್ದ ಸುನಿತಾ ವೀರಪ್ಪಗೌಡ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಹುಣಸೂರು ಉಪವಿಭಾಗದಲ್ಲಿ 08 ಸ್ಥಾನಗಳಿಗೆ 14 ಮಂದಿ ಸ್ಪರ್ಧಿಸಿದ್ದಾರೆ. 08 ಸ್ಥಾನಗಳಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿರಿಸಿದ್ದು, ಈ ಎರಡು ಸ್ಥಾನಗಳಿಗೆ ಮೂವರು ಮಹಿಳೆಯರು ಸ್ಪರ್ಧಿಸಿದ್ದಾರೆ. ಎರಡೂ ವಿಭಾಗಗಳಿಂದ ಚುನಾವಣಾ ಕಣದಲ್ಲಿ ಒಟ್ಟು 29 ಮಂದಿ ಸ್ಪರ್ಧಿಗಳಿದ್ದು, 1052 ಮಂದಿ ಮತದಾರರಿದ್ದಾರೆ.

ಮಂಗಳವಾರ ಬೆಳಗ್ಗೆ ಮೈಮುಲ್ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. 4.30ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ರಾತ್ರಿ 8ರ ಹೊತ್ತಿಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.

ಚುನಾವಣಾ ಪ್ರಕ್ರಿಯೆಗಾಗಿ ಮೈಮುಲ್ ಆವರಣದಲ್ಲಿ ನಾಲ್ಕು ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಹಾಗೂ ಹುಣಸೂರು ಉಪ ವಿಭಾಗಗಳಿಗೆ ತಲಾ ಎರಡು ಬೂತ್‍ಗಳನ್ನು ಸ್ಥಾಪಿಸಲಾಗಿದೆ.

ABOUT THE AUTHOR

...view details