ಮೈಸೂರು: ಮುಜರಾಯಿ ಇಲಾಖೆಯಿಂದ ಸಪ್ತಪದಿ ಯೋಜನೆಯಡಿ ಡಿಸೆಂಬರ್ 10ರಂದು ಸರಳ ಮತ್ತು ಸಾಮೂಹಿಕ ವಿವಾಹ ನಡೆಯಲಿದ್ದು, ಒಟ್ಟು 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮುಜರಾಯಿ ಇಲಾಖೆಯು ಸಪ್ತಪದಿ ಯೋಜನೆಯಡಿ ಡಿಸೆಂಬರ್ 10ರಂದು ಹನ್ನೆರಡು ಜೋಡಿಗಳ ಮದುವೆ ನಡೆಸಿಕೊಡುತ್ತಿದ್ದು, ಈ ವಿವಾಹ ಕಾರ್ಯಕ್ರಮವು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ಚಾಮುಂಡಿ ಬೆಟ್ಟ ಮತ್ತು ತಲಕಾಡಿನ ದೇವಾಲಯದಲ್ಲಿ ನಡೆಯಲಿದೆ. ಈ ಹಿಂದೆ ಇಲಾಖೆಯಿಂದ ಏಪ್ರಿಲ್ 26ರಂದು ಸಾಮೂಹಿಕ ವಿವಾಹ ನಿಗದಿಪಡಿಸಲಾಗಿತ್ತು. ಆದರೆ, ಕೋವಿಡ್ನಿಂದ ಮುಂದೂಡಲಾಯಿತು. ಈಗ ಈ ಕಾರ್ಯಕ್ರಮ ಡಿಸೆಂಬರ್ 10ರಂದು ನಡೆಯಲಿದ್ದು, ಎಲ್ಲ ತಯಾರಿ ಮಾಡಲಾಗಿದೆ.
ಪ್ರತಿ ಜೋಡಿಗೂ 55,000 ರೂ. ವೆಚ್ಚ:ವಿವಾಹವಾಗುವ ವರನಿಗೆ ಪ್ರೋತ್ಸಾಹಧನವಾಗಿ 5,000 ರೂ. ಹಣ ಜೊತೆಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ನೀಡಲಿದ್ದಾರೆ. ಇನ್ನು ವಧುವಿಗೆ 10,000 ರೂ. ಹಣ, ಹೂವಿನ ಹಾರ, ಧಾರೆ ಸೀರೆ ಜೊತೆಗೆ ಚಿನ್ನದ ತಾಳಿ, ಚಿನ್ನದ ಗುಂಡು ಖರೀದಿಗಾಗಿ 40,000ರೂ. ಹಣ ನೀಡಲಾಗುತ್ತಿದೆ. ವಿವಾಹ ನಡೆಯುವ ಸ್ಥಳದಲ್ಲೇ ನೋಂದಣಾಧಿಕಾರಿಗಳಿಂದ ವಿವಾಹ ನೋಂದಣಿ ನಡೆಯಲಿದ್ದು, ವಿವಾಹಕ್ಕೆ ಬರುವ ವಧುವರರ ಬಂಧುಗಳಿಗೆ ಉಟೋಪಚಾರ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಕಾರ್ಯಕ್ರಮ ನಡೆಸಲಾಗುತ್ತದೆ. ಜೋಡಿಯ ಗರಿಷ್ಠ 15 ಮಂದಿ ಸಂಬಂಧಿಕರು ಮಾತ್ರ ಬರಬಹುದು ಎನ್ನಲಾಗಿದೆ.
ಇನ್ನು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ 9 ಜೋಡಿ, ತಲಕಾಡಿನ ದೇಗುಲದಲ್ಲಿ 2 ಜೋಡಿ ಮತ್ತು ಚಾಮುಂಡಿ ಬೆಟ್ಟದಲ್ಲಿ 1 ಜೋಡಿ ಮದುವೆ ನಡೆಯಲಿದೆ. ಡಿಸೆಂಬರ್ 10ರಂದು ಬೆಳಗ್ಗೆ 11.30 ರಿಂದ 12.40ರವರೆಗಿನ ಅಭಿಜಿನ್ ಲಗ್ನದಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ದೇಗುಲದ ಆಗಮಿಕರು, ಪುರೋಹಿತರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇನ್ನು ಈ ಬಗ್ಗೆ ಈಟಿವಿ ಭಾರತ್ಗೆ ದೂರವಾಣಿ ಮೂಲಕ ಮುಜರಾಯಿ ಇಲಾಖೆಯ ತಹಶೀಲ್ದಾರ್ ಜಗದೀಶ್ ಮಾಹಿತಿ ನೀಡಿದ್ದು, ವಧುವಿಗೆ ಚಿನ್ನದ ತಾಳಿ ಮತ್ತು ಚಿನ್ನದ ಗುಂಡು ತಯಾರಿಸಲು ಆರ್ಡರ್ ನೀಡಿದ್ದೇವೆ. ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು ವಹಿಸಿ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.